ಸುಳ್ಯ: ಕಂದಕಕ್ಕೆ ಉರುಳಿದ ಟ್ರಾಕ್ಟರ್ ಮೂವರ ಸಾವು

Spread the love

ಸುಳ್ಯ: ಟ್ರ್ಯಾಕ್ಟರ್ ಕಂಪ್ರಸರ್ ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳಕ್ಕೆ ಉರುಳಿ ಬಿದ್ದ ಪರಿಣಾಮ ಮೂರು ಮಂದಿ ಸಾವನಪ್ಪಿದ ಘಟನೆ ಸುಳ್ಯ ತಾಲೂಕಿನ ಚೊಕ್ಕಾಡಿಯ ಶೇಣಿಯಲ್ಲಿ ಗುರುವಾರ ನಡೆದಿದೆ.

ಮೃತರನ್ನು ಚಾಲಕ ಶೇಣಿ ನಿವಾಸಿ ಮಾಧವ ಗೌಡ (35), ಕಾರ್ಮಿಕ ಶೇಣಿ ನಿವಾಸಿ ನಾರಾಯಣ ನಾಯ್ಕ (35) ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಕಾರ್ಮಿಕ ತಮಿಳುನಾಡು ಮೂಲದ ಸುಬ್ರಹ್ಮಣ್ಯ ರಾಜೇಂದ್ರ (42) ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್‌ನಲ್ಲಿದ್ದ ಕಾರ್ಮಿಕ ದೇವಪ್ಪ ಶೇಣಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

IMG-20150507-WA0003 IMG-20150507-WA0004

ಗುರುವಾರ ಬೆಳಗ್ಗೆ ಚೊಕ್ಕಾಡಿಯ ಶೇಣಿಯಿಂದ ಪಾಜಪಳ್ಳದ ಕಲ್ಲಿನ ಕೋರೆಗೆ ಚಾಲಕ ಸಹಿತ ನಾಲ್ವರು ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಶೇಣಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಆಳಕ್ಕೆ ಉರುಳಿ ಬಿದ್ದಿದ್ದು, ನಾಲ್ವರು ಟ್ರ್ಯಾಕ್ಟರ್‌ನ ಅಡಿಯಲ್ಲಿ ಸಿಲುಕಿಕೊಂಡರು.

ಸ್ಥಳೀಯರು ಮತ್ತು ವಾಹನ ಚಾಲಕರು, ಬೆಳ್ಳಾರೆ ಹೊರಠಾಣಾ ಪೊಲೀಸರ ಸಹಕಾರದಿಂದ ಒಂದುವರೆ ತಾಸು ಕಾರ್ಯಾಚರಣೆ ನಡೆಸಿ, ಟ್ರ್ಯಾಕ್ಟರ್‌ ಅಡಿಯಲ್ಲಿ ಸಿಲುಕಿದವರನ್ನು ಮೇಲೆಕ್ಕೆತ್ತುವ ಕಾರ್ಯ ನಡೆಸಿದರೂ ಅದಾಗಲೇ ಚಾಲಕ ಮಾಧವ ಮತ್ತು ಕಾರ್ಮಿಕ ನಾರಾಯಣ ನಾಯ್ಕ ಮೃತಪಟ್ಟಿದ್ದರು.

ಗಂಭೀರ ಸ್ಥಿತಿಯಲ್ಲಿದ್ದ ಸುಬ್ರಹ್ಮಣ್ಯ ರಾಜೇಂದ್ರ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದು, ಇನ್ನೋರ್ವ ಕಾರ್ಮಿಕ ಅದೃಷ್ಟವಶಾತ್‌ ಪಾರಾಗಿದ್ದಾರೆ.

ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Spread the love