Home Mangalorean News Kannada News ಅಂಚೆ ಇಲಾಖೆಯಲ್ಲಿ ಜೀತ ಪದ್ಧತಿ : ಮೋದಿಗೆ ಪತ್ರ ಬರೆದ ನೌಕರ!

ಅಂಚೆ ಇಲಾಖೆಯಲ್ಲಿ ಜೀತ ಪದ್ಧತಿ : ಮೋದಿಗೆ ಪತ್ರ ಬರೆದ ನೌಕರ!

Spread the love

ಅಂಚೆ ಇಲಾಖೆಯಲ್ಲಿ ಜೀತ ಪದ್ಧತಿ : ಮೋದಿಗೆ ಪತ್ರ ಬರೆದ ನೌಕರ!

ಮಂಗಳೂರು: ಇತ್ತೀಚೆಗಷ್ಟೇ ಕರ್ನಾಟಕದ ಪೊಲೀಸರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶಿತರಾಗಿ ಪ್ರತಿಭಟನೆಗೆ ಸಿದ್ಧರಾದದ್ದು ಹಳೆಯ ಸಂಗತಿ. ಇದು ರಾಜ್ಯ ಸರಕಾರದ ಕಥೆಯಾಯಿತು. ಪೊಲೀಸರಿಗಿಂತಲೂ ಕೆಟ್ಟ ಸ್ಥಿತಿಯಲ್ಲಿ ಕೇಂದ್ರ ಇಲಾಖೆಯಲ್ಲಿ ದುಡಿಯುತ್ತಿದ್ದರೂ ತಮ್ಮದು ಕೇಂದ್ರ ಸರಕಾರಿ ಉದ್ಯೋಗ ಅಲ್ಲ ಎಂದು ವ್ಯಥೆಯಿಂದ ನುಡಿಯುವ ನೌಕರರ ವರ್ಗವೊಂದಿದೆ. ಈ ನೌಕರರು ಬೇರೆ ಯಾರೂ ಅಲ್ಲ, ಭಾರತೀಯ ಅಂಚೆ ಇಲಾಖೆಯಲ್ಲಿ ದುಡಿಯುತ್ತಿರುವ ಇಲಾಖೇತರ ಡಾಕ್ ಸೇವಕರು. ಇವತ್ತಿಗೂ ಅಂಚೆ ಇಲಾಖೆ ಎಂದರೆ ಗ್ರಾಮೀಣ ಮಟ್ಟದಿಂದ ಹಿಡಿದು ನಗರದವರೆಗೆ ಅದಕ್ಕೊಂದು ಬೇರೆಯೇ ಆದ ಗೌರವವಿದೆ. ಭಾವನಾತ್ಮಕ ಸಂಬಂಧವಿದೆ. ಜನರ ಸುಖದು:ಖದಲ್ಲಿ ಭಾಗಿಯಾಗುವ ಅಂಚೆ ಇಲಾಖೆಯ ಅರ್ಧದಷ್ಟು ನೌಕರರ ಸುಖ ದು:ಖ ಕೇಳುವವರೇ ಇಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಅಂಚೆ ಇಲಾಖೆಯ ಸುಮಾರು 6 ಲಕ್ಷ ನೌಕರರಲ್ಲಿ ಮೂರು ಲಕ್ಷ ನೌಕರರಿಗೆ ಉದ್ಯೋಗ ಎನ್ನುವುದು ದಿನಗೂಲಿ ನೌಕರರಿಗಿಂಯ ಕಡೆ. ಸಾಮಾನ್ಯ ಮೇಸ್ತ್ರಿಯೊಬ್ಬ ಪಡೆಯುವ ಸಂಬಳವೂ ಇವರಿಗಿಲ್ಲ. ಆದರೂ ಇವರು ಕೇಂದ್ರ ಸರಕಾರಿ ಉದ್ಯೋಗಿಗಳು. ಭಾರತೀಯ ಅಂಚೆ ಇಲಾಖೆಯ ಹೆಮ್ಮೆಯ ನೌಕರರು. ಹಾಗಂತ ಕೇಂದ್ರ ಸರಕಾರವೇ ಹೇಳುತ್ತದೆ. ಆದರೆ ಇವರ ನೋವನ್ನು ಕೇಳಲು ಕೇಂದ್ರ ಸರಕಾರಕ್ಕೆ ಪುರುಸೊತ್ತಿಲ್ಲ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅಂಚೆಯಣ್ಣನ ಬಗ್ಗೆ ಅಪಾರ ಗೌರವ ಇಟ್ಟುಕೊಂಡವರು. ಅಂಚೆ ಇಲಾಖೆಯ ನೌಕರರನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿ ಸುಖದು:ಖ ಕೇಳಿ ಚಹಾ ಕುಡಿಸಿ ಗೌರವಿಸಿ ಕಳಿಸಿದ್ದರು. ಭಾಗಶ: ಅಂತಹ ಸೂಕ್ಷ್ಮ ಸಂವೇದನೆಯ ಮನುಷ್ಯರು ಈಗ ರಾಷ್ಟ್ರಪತಿ ಭವನ, ಸಂಸತ್ತಿನಲ್ಲಿ ಇಲ್ಲದಿರಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರಲ್ಲ, ಅವರಿಗೆ ನಮ್ಮ ಕಷ್ಟ ಅರ್ಥವಾಗುತ್ತದೆ ಎಂದು ಇಲ್ಲೊಬ್ಬರು ನೇರ ಪತ್ರ ಬರೆದು ಕಳಿಸಿದ್ದಾರೆ. ಪ್ರಧಾನಿ ಈ ಪತ್ರ ಪಡೆದಿದ್ದಾರೆ ಅಂತ ಮರು ಉತ್ತರವೂ ಇವರಿಗೆ ಸಿಕ್ಕಿದೆ.
ಹಳೆಯಂಗಡಿ ಪಕ್ಕದ ತೋಕೂರಿನಲ್ಲಿ ಇಲಾಖೇತರ ಡಾಕ್ ಸೇವಕರಾಗಿರುವ ಸುಬ್ರಹ್ಮಣ್ಯ ಕೆ. ರಾವ್ ಅವರು ಇತ್ತೀಚೆಗೆ ಪತ್ರ ಬರೆದು ಇಲಾಖೆಯಲ್ಲಿ ತನ್ನಂತೆ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ಮೂರು ಲಕ್ಷ ನೌಕರರ ಪರ ಮಾತನಾಡಿದ್ದಾರೆ.
ಪತ್ರದ ಆರಂಭದಿಂದಲೇ ತಮ್ಮನ್ನು ಜೀತದಾಳುಗಳೆಂದು ಕರೆಸಿಕೊಂಡಿರುವ ಸುಬ್ರಹ್ಮಣ್ಯ ರಾವ್ ಆಧುನಿಕ ಪರಿಭಾಷೆಯಲ್ಲಿ ಅಂಚೆ ಇಲಾಖೆ ತಮ್ಮನ್ನು ‘ಗ್ರಾಮೀಣ ಡಾಕ್ ಸೇವಕರು ಎಂಬ ಬಿರುದು ಕೊಟ್ಟಿದೆ ಎಂದು ಬರೆದುಬಿಡುತ್ತಾರೆ.
ಅಂದ ಹಾಗೆ ಮೊದಲಾಗಿ ಅಂಚೆ ಇಲಾಖೆಯಲ್ಲಿರುವ ಇಲಾಖೇತರ ನೌಕರರು ಮತ್ತು ಇಲಾಖೆಯ ನೌಕರರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಇಬ್ಬರು ಮಾಡುವ ಕೆಲಸ ಒಂದೇ ಆದರೂ ಅಂಚೆ ಇಲಾಖೆಯ ನೌಕರರು ದಿನಕ್ಕೆ ಎಂಟುಗಂಟೆ ಕೆಲಸ ಮಾಡಿ ಕೈತುಂಬಾ ಸಂಬಳ ಎಣಿಸಿದರೆ ಇಲಾಖೇತರ ನೌಕರರು(ಡಾಕ್ ಸೇವಕರು) ಅದೇ ಕೆಲಸವನ್ನು ಐದು ಗಂಟೆಯಲ್ಲಿ ಮಾಡಿ ಮುಗಿಸಬೇಕು. ಇದಕ್ಕೆ ಕೊಡುವ ಸಂಬಳ? ಅದನ್ನು ಮಾತ್ರ ಕೇಳಬೇಡಿ!
ಸುಶಿಕ್ಷಿತ ನಿರುದ್ಯೋಗಿಗಳನ್ನು ಕೇಂದ್ರ ಸರಕಾರ ಕುಣಿಸಿದ ಪರಿಯಿದು. ಕೆಲಸವಿಲ್ಲವೆಂದು ಖಾಲಿ ಕೂರುವುದಕ್ಕಿಂತ ಡಾಕ್ ಸೇವಕರ ಕೆಲಸ ಮಾಡಿ. ಕೆಲಸ ಭರಪೂರ, ಸಂಬಳ, ಪಿಎಫ್, ಇಎಸ್‌ಐ ಕೇಳಬೇಡಿ. ಹಾಗಂತ ನಿಯಮ ಮೀರಿದಿರೋ ಇಲಾಖೆ ತನ್ನ ನೌಕರರಿಗೆ ಯಾವ ಶಿಕ್ಷೆ ನೀಡುತ್ತದೋ ಅದೆಲ್ಲವೋ ಡಾಕ್ ಸೇವಕರಿಗೂ ಇದೆ.
ಸುಮಾರು ಮೂರು ಲಕ್ಷದಷ್ಟಿರುವ ನೌಕರರು ಅಂಚೆ ಇಲಾಖೆತ ಶೋಷಣೆಗೆ ರೋಸಿ ಹೋಗಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಪರಿಣಾಮ 1992ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಡಾಕ್ ಸೇವಕರನ್ನು ಇಲಾಖೆಯ ನೌಕರರಂತೆಯೇ ಪರಿಗಣಿಸಿ ಅವರಿಗೆ ಎಲ್ಲಾ ಸೌಲಭ್ಯಗಳನ್ನು ತತ್‌ಕ್ಷಣವೇ ನೀಡಿ ಎಂದಿತು.
ಆದರೆ ತೀರ್ಪು ಒಪ್ಪಿಕೊಂಡ ಕೇಂದ್ರ ಸರಕಾರ ಅಶಿಸ್ತಿಗಾಗಿ ಶಿಕ್ಷೆ ವಿಧಿಸುವ, ಹಾಗೂ ಸಿಬ್ಬಂದಿ ನೇಮಕದ ಮಟ್ಟಿಗೆ ಮಾತ್ರವೇ ಒಪ್ಪಿಕೊಂಡಿತು. ಆನಂತರ ತೆಪ್ಪಗಾಯ್ತು.
ಡಾಕ್ ಸೇವಕರು ಯೂನಿಯನ್‌ಗೆ ಸೇರಿ ಪ್ರತಿಭಟನೆ ನಡೆಸಿದರು. ಕಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಮಣಿದು ಅಯೋಗ ರಚನೆಯಾಯಿತು. ಸರಕಾರ ಬದಲಾಯಿತು. ಪರಿಣಾಮ ಆಗಲಿಲ್ಲ. 1993 ರಲ್ಲಿ ಮತ್ತೊಂದು ಆಯೋಗ ರಚನೆಯಾಯಿತು. 1997 ರಲ್ಲಿ ಜಸ್ಟೀಸ್ ಚರಣ್‌ಜಿತ್ ತಲ್ವಾರ್ ಆಯೋಗ ವರದಿ ಕೊಟ್ಟು ನೌಕರರ ಮನವಿಯನ್ನು ಪುರಸ್ಕರಿಸಿ ಎಂದಿತು. ಸರಕಾರ ಡೋಂಟ್‌ಕೇರ್ ಎಂದಿತು. 1997ರಲ್ಲಿ ಅನಿರ್ದಿಷ್ಟ ಪ್ರತಿಭಟನೆಗೆ ವೇದಿಕೆ ಸಿದ್ಧವಾಯಿತು.
ಆಗಿನ ಸಂಪರ್ಕ ಖಾತೆಯ ಸಚಿವ ಬೇಣಿ ಪ್ರಸಾದ್ ವರ್ಮಾ ಸರಕರಕ್ಕೆ ಒಂದಿಷ್ಟು ಸಮಯ ಕೊಡಿ, ಎಲ್ಲವನ್ನೂ ಸರಿಪಡಿಸುತ್ತೇವೆ ಎಂದರು. ಉಹೂಂ, ಬದಲಾವಣೆ ಆಗಲಿಲ್ಲ.1998 ರ ಜನವರಿ 5 ರಂದು ಒಂದು ದಿನ ಸಾಂಕೇತಿಕ ಮುಷ್ಕರ ನಡೆಯಿತು. 6ಲಕ್ಷ ಅಂಚೆ ನೌಕರರು ಬೀದಿಗಿಳಿದರು. ಇದರ ಬಳಿಕ ಪೆನ್ಷನ್ ಬದಲಿಗೆ ಎಕ್ಸ್‌ಗ್ರೇಶಿಯಾ ಹೆಸರಿನಲ್ಲಿ ನಿಕೃಷ್ಟ ಮೊತ್ತದ ಭಿಕ್ಷೆಯನ್ನು ಸರಕಾರ ನೌಕರರಿಗೆ ನೀಡುತ್ತಿದೆ.
ನಮ್ಮ ಸಂಸದರು ತಮ್ಮ ವೇತನ, ಭತ್ಯೆ ಎಲ್ಲಾ ಸೌಲಭ್ಯಗಳನ್ನು ತಮಗೆ ಬೇಕಾದಾಗಲೆಲ್ಲಾ ಏರಿಸಿಕೊಳ್ಳುತ್ತಾರೆ (ಮೋದಿ ಬಂದ ನಂತರ ಅದಕ್ಕೆ ತಡೆ ಹಾಕಿದ್ದಾರೆ) ಆಗ ಎಲ್ಲಾ ಪಕ್ಷದವರು ಒಂದಾಗಿ ಅದಕ್ಕೆ ಬೆಂಬಲ ನೀಡುತ್ತಾರೆ. ಆದರೆ ಅಂಚೆ ಇಲಾಖೆಗೆ ಪ್ರಾಮಾಣಿಕವಾಗಿ ದುಡಿಯುವ, ಚಿಲ್ಲರೆ ಸಂಬಳ ಪಡೆಯುವ ಡಾಕ್ ಸೇವಕರು 65ನೇ ವರ್ಷಕ್ಕೆ ನಿವೃತ್ತಿಯಾಗುವ ಹೊತ್ತಿಗೆ ಅವರಿಗೆ ಕೈಗೆ ಸಿಗುವುದು ಪುಡಿಕಾಸು. ವೃದ್ಧಾಪ್ಯದಲ್ಲಿ ಘನತೆಯಿಂದ ಬದುಕುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ. ಒಮ್ಮೆ ನೆನಪಿಸಿಕೊಳ್ಳಿ ಚಳಿ, ಮಳೆಯಿರಲಿ, ಗುಡ್ಡ, ಕೊಳ್ಳಗಳನ್ನು ನಡೆದುಕೊಂಡೇ ಹೋಗಿ ಸಂಬಂಧಪಟ್ಟವರಿಗೆ ಅಂಚೆಯನ್ನು ಮುಟ್ಟಿಸುವ, ಅಂಚೆ ಇಲಾಖೆಯ ಘನತೆಗೆ ಕುಂದುಂಟು ಬಾರದಂತೆ ದುಡಿಯುವ ಈ ಡಾಕ್‌ಸೇವಕರ ಬಗ್ಗೆ ನಾವೆಷ್ಟು ಮಂದಿ ಧ್ವನಿ ಎತ್ತಿದ್ದೇವೆ?
ಸುಬ್ರಹ್ಮಣ್ಯ ರಾವ್ ಇನ್ನೇನು ನಿವೃತ್ತಿಯಾಗಿ ಮನೆಗೆ ಹೋಗುತ್ತಾರೆ. ಆದರೆ ಇಂತಹ ಮೂರು ಲಕ್ಷ ನೌಕರರಿಗೆ ಈ ದೇಶದಲ್ಲಿ ಘನತೆಯಿಂದ ಬದುಕುವುದಕ್ಕೆ ಅವಕಾಶವಿಲ್ಲವೇ? ಮೊನ್ನೆ ಮೊನ್ನೆ ಗಾರ್ಮೆಂಟ್ ನೌಕರರು ಬೀದಿಗಿಳಿದು ತಮ್ಮ ಆಕ್ರೋಶ ತೋರಿಸಿದಂತೆ ಇವರೂ ತೋರಿಸಬೇಕೇ? ಮೋದಿಯವರ ಪ್ರತಿಕ್ರಿಯೆಗಾಗಿ ರಾವ್‌ರಂತ ಮೂರು ಲಕ್ಷ ಕಾರ್ಮಿಕರು ಕಾಯುತ್ತಿದ್ದಾರೆ.


Spread the love

Exit mobile version