ಅಂತರ್ಜಲ ಸಂರಕ್ಷಣೆಯ ಜತೆಗೆ ನೀರು ಕಲುಷಿತವಾಗದಂತೆ ತಡೆಯಬೇಕು: ಡಾ.ಯತೀಶ್ ಉಳ್ಳಾಲ್

Spread the love

ಅಂತರ್ಜಲ ಸಂರಕ್ಷಣೆಯ ಜತೆಗೆ ನೀರು ಕಲುಷಿತವಾಗದಂತೆ ತಡೆಯಬೇಕು: ಡಾ.ಯತೀಶ್ ಉಳ್ಳಾಲ್

ಮೂಡುಬಿದಿರೆ: ಪರಿಸರ ಜಾಗೃತಿಯ ಜತೆಗೆ ಜಲಸಂರಕ್ಷಣೆಯ ಪ್ರಾಯೋಗಿಕ ಅರಿವು ವಿದ್ಯಾರ್ಥಿಗಳಿಗಿರಬೇಕು. ಈ ನಿಟ್ಟಿನಲ್ಲಿ ಒಡ್ಡು ನಿರ್ಮಾಣದ ಕೆಲಸಗಳು ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುತ್ತದೆ. ತರಗತಿ ಪಾಠದೊಟ್ಟಿಗೆ ಪರಿಸರಕ್ಕೆ ಹತ್ತಿರವಾಗುವ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪುತ್ತೂರಿನ ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ ಹೇಳಿದರು.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗ ಮತ್ತು ಜಲ ಸಂರಕ್ಷಣಾ ಸಮಿತಿ ನಾರಾವಿ ಜಿಲ್ಲಾ ಪಂಚಾಯತ್, ವೇಣೂರು ಗ್ರಾಮ ಪಂಚಾಯತ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವೇಣೂರು ಹಾಗೂ ಊರ ನಾಗರಿರಕರ ಸಹಯೋಗದಲ್ಲಿ ಶನಿವಾರ ಬೆಳ್ತಂಗಡಿ ತಾಲೂಕಿನ ವೇಣೂರು ಕರಿಮಣೇಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲ್ಗುಣಿ ನದಿಗೆ ಸಾಂಪ್ರದಾಯಿಕ ಕಟ್ಟ ಕಟ್ಟುವ ಕಾರ್ಯಕ್ರಮ- ‘’ಜಲಾಮೃತ’’ ದಲ್ಲಿ ಮಾತನಾಡಿದರು.

ಜಾಗತಿಕ ತಾಪಮಾನದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಸಣ್ಣ ಮಟ್ಟಿನ ಜಲ ಸಂರಕ್ಷಣೆಯು ಪ್ರಕೃತಿಗೆ ನೀಡುವ ದೊಡ್ಡ ಕೊಡುಗೆಯಾಗಿದೆ. ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದರೊಂದಿಗೆ ನದಿಯ ನೀರು ಕಲುಷಿತವಾಗದಂತೆ ತಡೆಯುವುದು ಕೂಡ ಅಗತ್ಯವಿದೆ ಎಂದರು.

ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗವು ಸತತ 5 ವರ್ಷಗಳಿಂದ ನಾರಾವಿ, ವೇಣೂರು ಹಾಗು ಮೂಡುಬಿದಿರೆ ಆಸುಪಾಸಿನ ಹಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನದಿ- ತೋಡುಗಳಿಗೆ ಸುಮಾರು 20 ಸಾಂಪ್ರದಾಯಿಕ ಕಟ್ಟ ನಿರ್ಮಾಣ ಮಾಡಿದೆ. ಈ ಬಾರಿಯ ಕಟ್ಟವು 21ನೇಯದಾಗಿದ್ದು ಮತ್ತು ವಿದ್ಯಾರ್ಥಿಗಳೇ ನಿರ್ಮಿಸಿದ ಉದ್ದದ ಕಟ್ಟವಾದ್ದರಿಂದ ಇದೊಂದು ದಾಖಲೆಯಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಮಾನವಿಕ ವಿಭಾಗದ 120 ವಿದ್ಯಾರ್ಥಿಗಳು ಈ ಬಾರಿಯ ಕಟ್ಟ ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ಊಟೋಪಚಾರ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಮಯ್ಯ, ಅರ್ಥಶಾಸ್ತ್ರ ಉಪನ್ಯಾಸಕಿ ಪೂರ್ಣಿಮ, ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಎನ್‍ಸಿಸಿ ನೌಕಾದಳದ ಸಂಯೋಜಕ ನಾಗರಾಜ್, ವೇಣೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.


Spread the love