ಅಂತಿಮ ಸುತ್ತಿನ ಇಂದ್ರಧನುಷ್‍ಗೆ ಪೂರ್ವಭಾವಿ ಸಭೆ
ಮಂಗಳೂರು: ಮೂರನೇ ಹಾಗೂ ಅಂತಿಮ ಸುತ್ತಿನ ಮಿಷನ್ ಇಂದ್ರಧನುಷ್ ಗ್ರಾಮ ಸ್ವರಾಜ್ ಅಭಿಯಾನ ಅಕ್ಟೋಬರ್ 15,16, 17ಮತ್ತು 20ರಂದು ನಡೆಯಲಿದೆ. ಜಿಲ್ಲೆಯಲ್ಲಿ ಈ ಮೊದಲು ಎರಡು ಸುತ್ತಿನ ಇಂದ್ರಧನುಷ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮೂರನೇ ಸುತ್ತಿನ ಕಾರ್ಯಕ್ರಮವನ್ನು ಸಮನ್ವಯದ ಮೂಲಕ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸಸಿರಾಜ್ ಸೆಂಥಿಲ್ ಅವರು ಸೂಚನೆ ನೀಡಿದರು.
ಇಂದು ಜಿಲ್ಲಾ ಮಟ್ಟದ ಲಸಿಕಾ ಚಾಲನಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಜಿಲ್ಲೆಯಲ್ಲಿ ಲಸಿಕಾ ಅಭಿಯಾನದಡಿ ಶೇಕಡ 98 ಸಾಧನೆ ದಾಖಲಿಸಲಾಗಿದೆ. ಮೂರನೇ ಸುತ್ತಿನಲ್ಲೂ ತಾಲೂಕು ಮಟ್ಟ ಹಾಗೂ ಸ್ಥಳೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ಅಂತಿಮ ಸುತ್ತಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.
ಈ ನಡುವೆ ವಾಟ್ಸ್ಯಾಪ್ ಮೂಲಕ ಲಸಿಕಾ ಅಭಿಯಾನದ ಕುರಿತು ತಪ್ಪು ಮಾಹಿತಿ ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯಸ್ಥರು ಸೈಬರ್ ಕ್ರೈಮ್‍ಗೆ ದೂರು ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಡಬ್ಲ್ಯು ಎಚ್ ಒ ದ ಡಾ ಸತೀಶ್ ಅವರು ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಿ, ಎರಡನೇ ಸುತ್ತಿನಲ್ಲಿ ಒಟ್ಟು 1968 ಮಕ್ಕಳಲ್ಲಿ 1954 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಅನಾರೋಗ್ಯ ಪೀಡಿತ ಮಕ್ಕಳಿಗೆ ಲಸಿಕೆ ಹಾಕಲಾಗಿಲ್ಲ ಎಂದೂ ಅವರು ಸಭೆಗೆ ಮಾಹಿತಿ ನೀಡಿದರು. ತಾಲೂಕು ಮತ್ತು ಬ್ಲಾಕ್ ಲೆವಲ್‍ನಲ್ಲಿ ಲಸಿಕಾ ಚಾಲನಾ ಸಮಿತಿ ಸಭೆಯನ್ನು ಸಹಾಯಕ ಆಯುಕ್ತರು, ತಹಸೀಲ್ದಾರ್ ಇವರ ಅಧ್ಯಕ್ಷತೆಯಲ್ಲಿ ಮತ್ತೆ ನಡೆಯಲಿದ್ದು ಲಸಿಕಾ ಅಭಿಯಾನಕ್ಕೆ ಎಲ್ಲರೂ ಸಹಕಾರ ನೀಡಿರುತ್ತಾರೆ ಎಂದರು.
ಪ್ರಭಾರ ಡಿ ಎಚ್ ಒ ಸಿಕಂದರ್ ಪಾಷಾ ಅವರು ಉಪಸ್ಥಿತರಿದ್ದರು.