ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ: ವಚನ ವಿವೇಕ’

Spread the love

ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ: ವಚನ ವಿವೇಕ’

ಮೂಡುಬಿದಿರೆ: ಸಾವಿರ ಶತಮಾನಗಳ ಹಿಂದೆ ರಚಿತವಾಗಿರುವ ವಚನಗಳು ಎಲ್ಲಾ ಕಾಲಘಟ್ಟಗಳಿಗೂ ಸೂಕ್ತವಾದವುಗಳು. ಸಮಾಜದಲ್ಲಿನ ಓರೆಕೋರೆಗಳನ್ನು ವಚನಕಾರರು ತಮ್ಮ ಶ್ರೇಷ್ಠ ವಚನಗಳ ಮೂಲಕ ಪ್ರಶ್ನಿಸಿದರು. ತನ್ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ಸಾಮಾಜಿಕ ಸ್ವಾಸ್ಥ್ಯ ನೆಲೆಗೊಳ್ಳುವಂತೆ ಮಾಡಿದವು. ಜೀವನದ ಶ್ರದ್ಧೆ ಹಾಗೂ ಮೌಲ್ಯಗಳನ್ನು ವಚನಗಳು ತಿಳಿಸುವುದರಿಂದ ಪ್ರಸ್ತುತ ದಿನಗಳಿಗೆ ವಚನಗಳು ಎಂದಿಗಿಂತಲೂ ಹೆಚ್ಚು ಅನ್ವಯವಾಗುತ್ತವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯಯಡಪಡಿತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಅಂಬಿಗರಚೌಡಯ್ಯ ಅಧ್ಯಯನ ಪೀಠ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ವಿದ್ಯಾಗಿರಿಯ ಶಿವರಾಮ ಕಾರಂತ ಸಭಾಂಗಣದಲ್ಲಿನಡೆದ `ಅಂಬಿಗರಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ: ವಚನ ವಿವೇಕ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಚನಗಳಿಗೆ ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧಿ ಬಹುಮುಖ್ಯ. ವಚನಗಳನ್ನು ಓದುವವರು ಸೊನ್ನೆಯಾಗಿದ್ದರೆ ಮಾತ್ರ ಅವುಗಳನ್ನು ಕರಗತ ಮಾಡಿಕೊಳ್ಳುವುದು ಸುಲಭ. ಆದ್ದರಿಂದ ಇಂತಹ ಚಳುವಳಿಗಳಲ್ಲಿ ಆತ್ಮಶುದ್ಧಿ ಹಾಗೂ ನಿರಂಹಕಾರ ತತ್ವ ಬೇಕಾಗುತ್ತದೆ ಎಂದು ತಿಳಿಸಿದರು.

`ವಚನ ವಿವೇಕ’ ಕಾರ್ಯಕ್ರಮದ ಆಶಯವನ್ನು ತಿಳಿಸಿದ ವಿಮರ್ಶಕ ಡಾ.ಎಸ್.ನಟರಾಜ ಬೂದಾಳ, `ವಚನಕಾರರು ಶೂದ್ರ ಆಧ್ಯಾತ್ಮದ ಪ್ರತಿನಿಧಿಗಳು. ದೇವರು- ಧರ್ಮ-ಶಾಸ್ತ್ರಗಳನ್ನು ಧಿಕ್ಕರಿಸಿ ನಿಂತ ವಚನಗಳು ಸಾಮಾಜಿಕ ಕ್ರಾಂತಿ ಹುಟ್ಟು ಹಾಕುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿವೆ. ವಚನಕಾರರು ದೈವಮಾರ್ಗವನ್ನು ಒಪ್ಪುವುದಿಲ್ಲ. ಕೇವಲ ಗುರು ಮಾರ್ಗವನ್ನು ಮಾತ ್ರಅನುಸರಿಸುತ್ತಾರೆ. ದೇವರಿಗಿಂತ ಮಾನವೀಯತೆ ಹೊಂದಿದ ಮನುಷ್ಯನ ದೊಡ್ಡವನು’ ಎಂದರು. ಅಂಬಿಗರ ಚೌಡಯ್ಯನವರ ಕೆಲವು ವಚನಗಳನ್ನು ಪಠಿಸಿದ ಅವರು ಅದರಲ್ಲಿನ ಸಾಮಾಜಿಕ ಅಂಶಗಳ ಬಗ್ಗೆ ಚರ್ಚಿಸಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಕರ್ನಾಟಕದ ವಚನ ಸಾಹಿತ್ಯದ ಶ್ರೇಷ್ಠ ಪರಂಪರೆ ಬಗ್ಗೆ ಗೌರವದ ನುಡಿಗಳನ್ನಾಡಿದರು. ಜತೆಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇಂತಹ ವಿಶಿಷ್ಟ ವಿಚಾರಧಾರೆಗಳು ಚರ್ಚೆಯಾಗುತ್ತಿರುವದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಅಂಬಿಗರಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಡಾ. ನಾಗಪ್ಪಗೌಡ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥಡಾ.ಯೋಗಿಶ್‍ಕೈರೋಡಿ ನಿರೂಪಿಸಿದರು.


Spread the love