ಅಂಬ್ಲ ಮೊಗರು ಗ್ರಾಮದ ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ

Spread the love

ಅಂಬ್ಲ ಮೊಗರು ಗ್ರಾಮದ ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ

ಮಂಗಳೂರು: ಬಡ ರೈತರ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಗೂಂಡಾ ಪ್ರವೃತ್ತಿಯ ಏಜಂಟರನ್ನು ಮುಂದಿಟ್ಟು ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಮುನ್ನೂರು, ಬೆಳ್ಯ ಮಂಜನಾಡಿ ಗ್ರಾಮಗಳಲ್ಲಿ ಅತಿ ಕಡಿಮೆ ದರ ನೀಡಿ ಕೃಷಿ ಭೂಮಿ ಸ್ವಾಧೀನ ಪಡಿಸಲಾಗುತ್ತಿದೆ. ಸುತ್ತಲಿನ ಜಮೀನು ಖರೀದಿ ಮಾಡಿ ಮಧ್ಯದಲ್ಲಿರುವ ಕೃಷಿ ಭೂಮಿಯ ಸಂಪರ್ಕ ರಸ್ತೆಗಳನ್ನು ಮುಚ್ಚಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಜಿಲ್ಲಾಧಿಕಾರಿಯನ್ನೂ ತಾಳಕ್ಕೆ ತಕ್ಕಂತೆ ಕುಣಿಸುವ ಭೂಮಾಫಿಯಾಗಳು ಹೊಸ ಸಾಮ್ರಾಜ್ಯವನ್ನು ಕಟ್ಟಿದೆ. ಜನಪ್ರತಿನಿಧಿಗಳು ಕೃಷಿ ಪರಂಪರೆಯ ಉಳಿವಿನ ಹೆಸರಿನಲ್ಲಿ ಕಂಬಳ ಆಯೋಜಿಸುವ ಸಂಭ್ರಮದಲ್ಲಿ ಮುಳುಗಿದ್ದಾರೆ. ಇವರಿಂದ ಕೃಷಿಭೂಮಿ ಉಳಿಸಲು ಸಾಧ್ಯವೇ?ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಅಂಬ್ಲ ಮೊಗರು ಗ್ರಾಮದ ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಮೀನ್ದಾರಿಕೆ ಪದ್ಧತಿಯ ವಿರುದ್ಧ ಗೇಣಿದಾರ ರೈತರು ದಶಕಗಳ ಕಾಲ ಸಂಘರ್ಷ ನಡೆಸಿ ಭೂಮಿಯ ಹಕ್ಕು ಪಡೆದ ಉಳ್ಳಾಲ ತಾಲೂಕಿನಲ್ಲಿ ನವ ಭೂಮಾಲಕ ಪದ್ಧತಿ ತಲೆ ಎತ್ತಿದೆ. ರೈತರ ನೂರಾರು ಎಕರೆ ಜಮೀನು ಸದ್ದಿಲ್ಲದೆ ಬಲಾಡ್ಯ ವರ್ಗದ ಪಾಲಾಗುತ್ತಿದೆ. ಅತ್ತ ನರಿಂಗಾನದಲ್ಲಿ ಕಾಂಗ್ರೆಸಿಗರು, ಇತ್ತ ಜಪ್ಪಿನಮೊಗರಿನಲ್ಲಿ ಬಿಜೆಪಿಗರು ಆಡಂಬರದ ಕಂಬಳಗಳನ್ನು ಆಯೋಜಿಸಿದ್ದಾರೆ. ಆದರೆ ಈ ಎರಡು ಕಂಬಳ ಕೇಂದ್ರಗಳ ನಡುವಿನ ಗ್ರಾಮಗಳಲ್ಲಿ ನೈಜ ರೈತಾಪಿಗಳು ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದರೂ, ಈ ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಬದಲಿಗೆ ಭೂಮಾಫಿಯಾಗಳಿಂದಲೇ ಕಂಬಳದ ಪ್ರಾಯೋಜಕತ್ವ ಪಡೆಯುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.

ಕಂಬಳದ ಕುರಿತಾದ ಕಾಳಜಿ ನೈಜ ರೈತರು, ಕೃಷಿ ಭೂಮಿಯ ಉಳಿವಿನ ಕುರಿತು ಶಾಸಕರುಗಳಿಗೆ ಇರದಿರುವುದು ವಿಷಾದನೀಯ, ಇಂತಹ ಬೂಟಾಟಿಕೆಯ ಜನಪ್ರತಿನಿಧಿಗಳನ್ನು ನಂಬಿ ಕೂರದೆ, ಬಲಿಷ್ಟ ಹೋರಾಟಕ್ಕೆ ಜನತೆ ಮುಂದಾಗಬೇಕು ಎಂದು ಇಐ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳರವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ರೈತ ಸಂಘಟನೆಯ ಮುಖಂಡರಾದ ಶೇಖರ್ ಕುಂದರ್, ವಿಶ್ವನಾಥ್ ತೇವುಲ, ಕಾರ್ಮಿಕ ಮುಖಂಡರಾದ ಸುಂದರ ಕುಂಪಲ, ವಿಲಾಸಿನಿ, ಪ್ರಮೋದಿನಿ, ಜನಾರ್ದನ ಕುತ್ತಾರ್, ರಫೀಕ್ ಹರೇಕಳ, ಅನ್ಸಾರ್ ಬಜಾಲ್, ಜಯರಾಮ ತೇವುಲ, ಲೋಕೇಶ್ ಅಳಪೆ, ಯುವಜನ ನಾಯಕರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ವಿದ್ಯಾರ್ಥಿ ನಾಯಕರಾದ ವಿನುಷ ರಮಣ, ಕೋಶಿನ್, ನಾಯಕಿಯರಾದ ಪ್ರಮಿಳಾ ಶಕ್ತಿನಗರ, ಶಶಿಕಲಾ ಕುತ್ತಾರ್, ಪ್ರಮೀಳಾ ದೇವಾಡಿಗ, ನಳಿನಾಕ್ಷಿ ಶೆಟ್ಟಿ, ಮಾಜಿ ತಾಪಂ ಸದಸ್ಯರಾದ ಶಾಲಿನಿ ಪೂಜಾರಿ, ಮುನ್ನೂರು ಗ್ರಾಪಂ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾ‌ರ್, ಗ್ರಾಪಂ ಸದಸ್ಯೆ ರಾಜೇಶ್ವರಿ ಪಾಲ್ಗೊಂಡಿದ್ದರು.


Spread the love
Subscribe
Notify of

0 Comments
Inline Feedbacks
View all comments