ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸ್ಪಿರಿಟ್ ವಶ: ಮೂರು ಮಂದಿಯ ಸೆರೆ
ಮಂಗಳೂರು: ನಗರದ ಕೊಣಾಜೆ ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಎಂಬಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಾಗೂ ದಾಸ್ತಾನು ಇರಿಸಿದ್ದ ಸ್ಪಿರಿಟ್ (ಕಳ್ಳ ಭಟ್ಟಿ) ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕಾರು ಹಾಗೂ 3 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಅಂಬ್ಲಮೊಗರು ನಿವಾಸಿ ಡೆನ್ಜಿಲ್ ವಿಕ್ಸನ್ ಡಿ’ಸೋಜಾ (28), ಕೊಣಾಜೆ ನಿವಾಸಿ ಮೋಹನ್ ದಾಸ್ ಎಂ ಶೆಟ್ಟಿ (36), ಕುತ್ತಾರು ನಿವಾಸಿ ಬೋಜ ಕೊಟ್ಟಾರಿ (50) ಎಂದು ಗುರುತಿಸಲಾಗಿದೆ
ನವೆಂಬರ್ 3 ರಂದು ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಎಂಬಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಸ್ಪಿರಿಟ್ (ಕಳ್ಳ ಭಟ್ಟಿ) ನ್ನು ಸಾಗಾಟ ಮಾಡುತ್ತಿದ್ದಾರೆಂಬ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎಲಿಯಾರ್ ಪದವು ಎಂಬಲ್ಲಿ ಕೆಎ-19-ಎಂಸಿ- 5793 ನೇ ಬಿಳಿ ಬಣ್ಣದ ಮಾರುತಿ ಸ್ಟಿಪ್ಟ್ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕಾರು ಹಾಗೂ ಸ್ಪಿರಿಟ್ (ಕಳ್ಳ ಭಟ್ಟಿ) ನ್ನು ವಶಕ್ಕೆ ಪಡೆದುಕೊಂಡು ಕಾರಿನಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಕಾರಿನಲ್ಲಿ ಹಾಗೂ ಬಾಡಿಗೆ ಮನೆಯೊಂದರಲ್ಲಿ ತಲಾ 35 ಲೀಟರ್ ನ 10 ಕ್ಯಾನ್ ಗಳಲ್ಲಿ ದಾಸ್ತಾನು ಇರಿಸಿದ್ದ ಒಟ್ಟು 350 ಲೀಟರ್ ಸ್ಪಿರಿಟ್ (ಕಳ್ಳ ಭಟ್ಟಿ), 4 ಮೊಬೈಲ್ ಫೋನ್ ಗಳು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕೆಎ-19-ಎಂಸಿ-5793 ನೇ ಮಾರುತಿ ಸ್ವಿಪ್ಟ್ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ.7,02,900 /- ಆಗಿರುತ್ತದೆ. ಆರೋಪಿಗಳ ಪೈಕಿ ಮೋಹನ್ ಶೆಟ್ಟಿ ಎಂಬಾತನು ಈ ಅಕ್ರಮ ಸ್ಪಿರಿಟ್ (ಕಳ್ಳ ಭಟ್ಟಿ) ದಂಧೆಯ ರೂವಾರಿಯಾಗಿರುತ್ತಾನೆ. ಆರೋಪಿಗಳು ಮಂಜೇಶ್ವರ ಮೂಲದ ವ್ಯಕ್ತಿಯೊಬ್ಬನಿಂದ ಈ ಸ್ಪಿರಿಟ್ (ಕಳ್ಳ ಭಟ್ಟಿ) ನ್ನು ಖರೀದಿ ಮಾಡಿ ನಂತರ ಒಂದು ಕ್ಯಾನ್ ಸ್ಪಿರಿಟ್ (ಕಳ್ಳ ಭಟ್ಟಿ) ಗೆ 3 ಕ್ಯಾನ್ ನೀರು ಸೇರಿ ಮಾರಾಟ ಮಾಡುವುದಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಆರೋಪಿ ಡೆನ್ಜಿಲ್ ವಿಕ್ಸನ್ ಡಿ;ಸೋಜಾ ಎಂಬಾತನ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಯಂತೆ ಪ್ರಕರಣವೊಂದು ದಾಖಲಾಗಿತ್ತು. ಈತನು ಈ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೆಲ್ವಿನ್ ವಿಶ್ವಾಸ್ ಡಿ ಸೋಜಾ ಎಂಬಾತನ ಸಹೋದರನಾಗಿರುತ್ತಾನೆ.
ಆರೋಪಿಗಳ ಪೈಕಿ ಮೋಹನ್ ಶೆಟ್ಟಿ ಎಂಬಾತನು ಈ ಹಿಂದೆ ಕೂಡಾ ಇದೇ ರೀತಿ ಸ್ಪಿರಿಟ್ (ಕಳ್ಳ ಭಟ್ಟಿ), ಕಳ್ಳ ಸಾಗಾಟ ಮಾಡುತ್ತಿದ್ದು, ಈತನ ವಿರುದ್ಧ ಈ ಹಿಂದೆ ಅಬಕಾರಿ ದಳದಲ್ಲಿ ಸ್ಪಿರಿಟ್ (ಕಳ್ಳ ಭಟ್ಟಿ), ಸಾಗಾಟಕ್ಕೆ ಸಂಬಂಧಪಟ್ಟಂತೆ ಎರಡು ಪ್ರಕರಣ, ಹಾಗೂ ಕೊಣಾಜೆ, ಉಳ್ಳಾಲ, ಹಾಗೂ ವಿಟ್ಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿರುತ್ತದೆ.
ಪೊಲೀಸ್ ಕಮೀಷನರ್ ಶ್ರೀ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.
.