ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಡ್ಡೆಗೆ ಸಿಸಿಬಿ ಪೊಲೀಸರ ದಾಳಿ
ಮಂಗಳೂರು: ನಗರದ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಾರ ಹಾಗೂ ಜೆಪ್ಪು ಮಾರ್ಕೆಟ್ ಪರಿಸರದ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಡ್ಡೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, 93 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬೋಳಾರದ ಪ್ರಶಾಂತ್ (42) ಮತ್ತು ಬಿ.ಸಿ.ರೋಡ್ ಸಮೀಪದ ಕೈಕಂಬದ ಸದಾಶಿವ ರೈ (47) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಹರೀಶ್ ಹಾಗೂ ಕೂಸಪ್ಪ ಎಂಬವರು ತಪ್ಪಿಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೋಳಾರ ಮತ್ತು ಜೆಪ್ಪು ಮಾರ್ಕೆಟ್ ಬಳಿ ಗ್ಯಾಸ್ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಎರಡು ಅಡ್ಡೆಗಳಿಗೆ ದಾಳಿ ನಡೆಸಿದರು. ಈ ಸಂದರ್ಭ ಪಾಂಡೇಶ್ವರ ಠಾಣೆಯ ಪೊಲೀಸರಲ್ಲದೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳೂ ಕೈ ಜೋಡಿಸಿದ್ದರು.
ಬಂಧಿತ ಆರೋಪಿಗಳು ಸರಕಾರಿ ಸ್ವಾಮ್ಯದ ಕಂಪೆನಿಗಳಿಂದ ಪೂರೈಕೆಯಾಗುವ ಗೃಹಬಳಕೆಯ ಆಡುಗೆ ಅನಿಲ ಸಿಲಿಂಡರ್‌ಗಳಿಂದ ಇತರ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ರಿಫಿಲ್ಲಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಗ್ಯಾಸ್ ತುಂಬಿದ ಮತ್ತು ಖಾಲಿ ಸಿಲಿಂಡರ್‌ಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡುವ ಪಂಪ್ ಹಾಗೂ ಇತರ ಪರಿಕರಗಳು, ಒಂದು ಪಿಕ್‌ಅಪ್ ಜೀಪು, ಗೂಡ್ಸ್ ಟೊಂಪೋವನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 6,44,400 ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್‌ರ ನಿರ್ದೇಶನದಲ್ಲಿ ಪೊಲೀಸ್ ಉಪಾಯುಕ್ತರಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಮಾರ್ಗದರ್ಶನದಂತೆ ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈಗಳಾದ ಶ್ಯಾಮ್ ಸುಂದರ್, ಕಬ್ಬಾಳ್‌ರಾಜ್ ಹಾಗೂ ಪಾಂಡೇಶ್ವರ ಠಾಣೆಯ ಎಸ್ಸೈ ರಾಜೇಂದ್ರ, ಮಂಜುಳಾ ಮತ್ತು ಸಿಬ್ಬಂದಿ ವರ್ಗ, ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಮಂಗಳೂರು ಆಹಾರ ನಿರೀಕ್ಷಕಿ ಕಮಲಾ ದಾಳಿಯಲ್ಲಿ ಪಾಲ್ಗೊಂಡಿದ್ದರು.