Home Mangalorean News Kannada News ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಬಜರಂಗದಳ ಕಾರ್ಯಕರ್ತ ಸಹಿತ ಇಬ್ಬರ ಬಂಧನ

ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಬಜರಂಗದಳ ಕಾರ್ಯಕರ್ತ ಸಹಿತ ಇಬ್ಬರ ಬಂಧನ

Spread the love

ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಬಜರಂಗದಳ ಕಾರ್ಯಕರ್ತ ಸಹಿತ ಇಬ್ಬರ ಬಂಧನ

ಬಂಟ್ವಾಳ: ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ವಿಟ್ಲ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.

ವಿಟ್ಲ ಪಡ್ನೂರು ಗ್ರಾಮದ ನಿವಾಸಿ, ಶಶಿಕುಮಾರ್ (48) ಹಾಗೂ ಕೊಳ್ನಾಡು ಗ್ರಾಮ ನಿವಾಸಿ ಅಬ್ದುಲ್ ಹಾರಿಸ್(21) ಬಂಧಿತ ಆರೋಪಿಗಳು. ಆರೋಪಿಗಳನ್ನು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಬಂಧಿಸಲಾಗಿದೆ.

ಘಟನೆ ಹಿನ್ನೆಲೆ: ವಿಟ್ಲದಿಂದ ಕೇರಳದ ಕಸಾಯಿಖಾನೆಗೆ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ವಿಟ್ಲ ಪೊಲೀಸರು ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ 11 ಗಂಟೆಗೆ ಸುಮಾರಿಗೆ ಪೊಲೀಸರು ಕಡಂಬು ಜಂಕ್ಷನ್‌ನಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನವೊಂದರಲ್ಲಿ ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 4 ದನಗಳು ಮತ್ತು ಒಂದು ಕರು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾನುವಾರು ಹಾಗೂ ವಾಹನದ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಟೆಂಪೊ ವಾಹನದಲ್ಲಿದ್ದ ಇಬ್ಬರು ಆರೋಪಿಗಳಾದ ಶಶಿಕುಮಾರ್ ಹಾಗೂ ಹಾರಿಸ್‌ನನ್ನು ಬಂಧಿಸಲಾಗಿದೆ.

”ಬಂಧಿತ ಆರೋಪಿಗಳ ಪೈಕಿ ಶಶಿಕುಮಾರ್ ಎಂಬಾತನು ಭಜರಂಗದಳದ ಕಾರ್ಯಕರ್ತನಾಗಿದ್ದು, ಅಬ್ದುಲ್ ಹಾರಿಸ್ ಈ ಹಿಂದೆ ಅಳಿಕೆ ಎಂಬಲ್ಲಿ ದನ ಕಳವು ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದು, ಕೊಣಾಜೆ ಠಾಣೆಯಲ್ಲಿ ಕೂಡ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದೆೆ. ಜಾನುವಾರುಗಳನ್ನು ಸಾಗಾಟಕ್ಕೆ ಬಳಸುತ್ತಿದ್ದ ವಾಹನವನ್ನು ಈ ಕೃತ್ಯಕ್ಕೆ ಅನಕೂಲವಾಗುವಂತೆ ಬದಲಾಯಿಸಿಕೊಂಡು ಯಾರಿಗೂ ಅನುಮಾನ ಬಾರದಂದೆ ಸಾಗಾಟ ಮಾಡುತ್ತಿದ್ದರು ಎಂದು ಘಟನೆಯ ಬಗ್ಗೆ ದ.ಕ. ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.

ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕರಾದ ನಾಗರಾಜ್ ಎಚ್.ಇ. ಹಾಗೂ ಸಿಬ್ಬಂದಿ ಅಭಿಜಿತ್, ಲೋಕೇಶ್, ರಮೇಶ್, ರಕ್ಷಿತ್ ಮತ್ತು ವಾಹನ ಚಾಲಕ ರಘರಾಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Exit mobile version