ಅಕ್ರಮ ಮರಳುಗಾರಿಕೆಯಲ್ಲಿ ಪೋಲಿಸ್ ಇಲಾಖೆ ಬೆಂಬಲ. ನೇರ ಮಾಹಿತಿ ನೀಡಿ – ಅಣ್ಣಾಮಲೈ
ಚಿಕ್ಕಮಗಳೂರು: ಅಕ್ರಮ ಮರಳುಗಾರಿಕೆಯಲ್ಲಿ ವಶಕ್ಕೆ ಪಡೆದ ವಾಹನಗಳಿಂದ ಹಣ ಪಡೆದು ಅಕ್ರಮ ಚಟುವಟಿಕೆಗಳಿಗೆ ಬೆಂಬಲಿಸುತ್ತಿದ್ದು ಅಂತಹ ಘಟನೆಗಳು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ನೇರ ತನ್ನನ್ನು ಸಂಪರ್ಕಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ವಿನಂತಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ವಾಹನಗಳನ್ನು ಪೋಲಿಸರು ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಕೆಲವು ಪೋಲಿಸ್ ಅಧಿಕಾರಿ/ಸಿಬಂದಿಗಳು ಲಾರಿ ಮಾಲಿಕ/ ಚಾಲಕರುಗಳ ಹತ್ತಿರ ಹಣವನ್ನು ತೆಗೆದುಕೊಂಡು ವಾಹನಗಳನ್ನು ಬಿಟ್ಟು ಕಳುಹಿಸಿಕೊಡುತ್ತಿರುವುದು ಹಾಗೂ ವಾಹನಗಳನ್ನು ವಶಕ್ಕೆ ತೆಗೆದುಕೊಂಡ ನಂತರ, ನಿಮ್ಮ ವಿರುದ್ದ ಜಿಲ್ಲಾ ಪೋಲಿಸ್ ಕಛೇರಿಗೆ ವರದಿಯನ್ನು ಕಳುಹಿಸಿದರೆ ದೊಡ್ಡ ಮೊತ್ತದ ದಂಡವನ್ನು ಕಟ್ಟಿಸಿಕೊಳ್ಳುತ್ತಾರೆ ಆದುದರಿಂದ ನಮಗೆ ಹಣವನ್ನು ನೀಡಿದ್ದಲ್ಲಿ ವಾಹನವನ್ನು ಇಲ್ಲಿಯೇ ಬಿಟ್ಟು, ಕಳುಹಿಸಿಕೊಡಲಾಗುವುದು ಎಂದು ಕೆಲವು ಪೋಲಿಸ್ ಅಧಿಕಾರಿ/ಸಿಬಂದಿಗಳು ಹಣವನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಮಾಹಿತ ತನ್ನ ಗಮನಕ್ಕೆ ಬಂದಿರುತ್ತದೆ.
ಇದಲ್ಲದೆ ಕೆಲವು ಪೋಲಿಸ್ ಅಧಿಕಾರಿ/ಸಿಬಂದಿಗಳು ಹಿರಿಯ ಪೋಲಿಸ್ ಅಧಿಕಾರಿಗಳ ಹೆಸರನ್ನು ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುತ್ತಿರುವ ಮಾಹಿತಿಯೂ ಸಹ ತನ್ನ ಗಮನಕ್ಕೆ ಬಂದಿದೆ.
ಆದುದರಿಂದ, ಎಲ್ಲಾ ಸಾರ್ವಜನಿಕರು ಇಂತಹ ಯಾವುದೇ ಕಾರಣಗಳಿಗೆ ಪೋಲಿಸರು ಹಣದ ಬೇಡಿಕೆ ಇಟ್ಟಲ್ಲಿ ವರಿಷ್ಠಾಧಿಕಾರಿಗಳಿಗೆ ನೇರ ಮೊಬೈಲ್ ಕರೆ ಮಾಡಿ ಹೇಳುವಂತೆ ವಿನಂತಿಸಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೊಬೈಲ್ ನಂಬರ್ 9480805173