ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ – ರೂ 9.91 ಲಕ್ಷದ ಸೊತ್ತು ವಶ
ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ನ ಕಂಕನಾಡಿ ನಗರ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಗಳಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಕಳ್ಳತನ ಮಾಡಿ ಸಾಗಾಟಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರ ಪೊಲೀಸರು ಅಕ್ರಮ ಮರಳುಗಾರಿಕೆ ಅಡ್ಡೆಯಾದ ಕಣ್ಣೂರು ಬಡಿಲ ಹಾಗೂ ಪೆರ್ಮನ್ನೂರು ಗ್ರಾಮದ ಕಲ್ಲಾಪು ಎಂಬಲ್ಲಿಗೆ ದಾಳಿ ನಡೆಸಿ ಎರಡು ಲಾರಿ ಮತ್ತು 44 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಯಿತು.
ಸ್ವಾಧೀನ ಪಡಿಸುವ ಟಿಪ್ಪರ್ ಲಾರಿಗಳು ಹಾಗೂ ಮರಳನ್ನು ಒಟ್ಟು ಮೌಲ್ಯ ರೂ.9,91,000/- ಆಗಿರುತ್ತದೆ. ಈ ಬಗ್ಗೆ ಕಂಕನಾಡಿ ನಗರ ಹಾಗೂ ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿರುತ್ತವೆ.
ಈ ದಾಳಿ ಸಿ.ಸಿ.ಬಿ ಘಟಕದ ನಿರೀಕ್ಷಕರಾದ ಶಿವಪ್ರಕಾಶ್ ಆರ್ ನಾಯಕ್ರವರ ನೇತೃತ್ವದಲ್ಲಿ ನಡೆದಿದ್ದು, ದಾಳಿಯಲ್ಲಿ ಉರ್ವ ಪೊಲೀಸ್ ಠಾಣಾ ನಿರೀಕ್ಷಕರಾದ ಶರೀಫ್, ಸಂಚಾರ ದಕ್ಷಿಣ ಪೋಲೀಸ್ ಠಾಣೆ ನಿರೀಕ್ಷಕರಾದ ಗುರು ಕಾಮತ್, ಸಿ.ಸಿ.ಬಿ ಘಟಕದ ಪಿ.ಎಸ್.ಐ ರವರಾದ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.