ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆ; 5 ಲಕ್ಷ ರೂ. ಮೌಲ್ಯದ ಮರಳು ವಶ

Spread the love

ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆ; 5 ಲಕ್ಷ ರೂ. ಮೌಲ್ಯದ ಮರಳು ವಶ

ಮಂಗಳೂರು : ನಗರ ಹೊರವಲಯದ ವಳಚ್ಚಿಲ್, ಅಡ್ಯಾರ್, ಅರ್ಕುಳದ ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಅಡ್ಡೆಯನ್ನು ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದಾರೆ.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಾಮ್‌ರಾವ್ ನೇತೃತ್ವದ ಪೊಲೀಸ್ ತಂಡವು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳ ಮತ್ತು ಮಂಗಳೂರು ಗ್ರಾಮಾಂತರ ಠಾಣಾಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸುಮಾರು 780 ಟನ್ (78 ಲೋಡ್) ಮರಳನ್ನು ವಶಪಡಿಸಿಕೊಂಡಿದೆ. ಸ್ವಾಧೀನಪಡಿಸಿಕೊಂಡ ಮರಳಿನ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ವಳಚ್ಚಿಲ್, ಅಡ್ಯಾರ್, ಅರ್ಕುಳಕ್ಕೆ ದಾಳಿ ನಡೆಸಿದ ಪೊಲೀಸರು ಅಕ್ರಮ ಮರಳು ದಾಸ್ತಾನು ಅಡ್ಡೆಯನ್ನು ಪತ್ತೆ ಹಚ್ಚಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿದರು.

ಈ ಮರಳನ್ನು ಯಾರು, ಯಾವ ಉದ್ದೇಶಕ್ಕಾಗಿ ದಾಸ್ತಾನು ಮಾಡಿರುತ್ತಾರೆ ? ಕಳವು ಮಾಡಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಮರಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ-ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.


Spread the love