ಅಕ್ರಮ ಮರಳು ಸಾಗಣೆಗೆ ಅಧಿಕಾರಿಗಳ ಸಾಥ್‌ ; 7 ಅಧಿಕಾರಿಗಳನ್ನು ವಶಕ್ಕೆ ಪಡೆದ ಚಿಕ್ಕಮಗಳೂರು ಪೋಲಿಸರು

Spread the love

ಅಕ್ರಮ ಮರಳು ಸಾಗಣೆಗೆ ಅಧಿಕಾರಿಗಳ ಸಾಥ್‌ ; 7 ಅಧಿಕಾರಿಗಳನ್ನು ವಶಕ್ಕೆ ಪಡೆದ ಚಿಕ್ಕಮಗಳೂರು ಪೋಲಿಸರು

ಚಿಕ್ಕಮಗಳೂರು: ಮರಳು ಸಾಗಣೆ ಪರವಾನಗಿ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಮರಳು ಸಾಗಿಸಲು ಕೈಜೋಡಿಸಿದ ಆರೋಪದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು, ಸಿಬ್ಬಂದಿ ಸೇರಿದಂತೆ 7 ಮಂದಿಯನ್ನು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಕಾರ‍್ಯಪಾಲಕ ಎಂಜಿನಿಯರ್‌ ಲೋಕೇಶಪ್ಪ, ಸಹಾಯಕ ಎಂಜಿನಿಯರ್‌ ಲೋಕೇಶ್‌, ಸಿಬ್ಬಂದಿ ಚಿರಂಜೀವಿ, ಧರ್ಮಲಿಂಗಂ, ಗುತ್ತಿಗೆದಾರ ಅಕ್ಷಯ್‌ ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಉಡುಪಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಅಕ್ರಮ ಮರಳು ಸಾಗಣೆಗೆ ಸಹಕಾರ ನೀಡುತ್ತಿರುವ ಬಗ್ಗೆ ಉಡುಪಿ ಪೊಲೀಸರಿಂದ ಖಚಿತ ಮಾಹಿತಿ ಪಡೆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಡಿಸಿಐಬಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ ನೇತೃತ್ವದ ತಂಡಕ್ಕೆ ಪರಿಶೀಲಿಸಲು ಸೂಚಿಸಿದ್ದರು. ಮಂಗಳವಾರ ಸಂಜೆ ಲೋಕೋಪಯೋಗಿ ಇಲಾಖೆ ಕಚೇರಿಯ ಬಾಗಿಲು ಬಂದ್‌ ಮಾಡಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ಪರವಾನಗಿ ದಾಖಲೆಗಳನ್ನು ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಅದಿರು ಸಾಗಣೆ ಪರವಾನಗಿ (ಮಿನರಲ್‌ ಡಿಸ್ಪ್ಯಾಚ್‌ ಪರ್ಮಿಟ್‌)ಗಳನ್ನು ದುರುಪಯೋಗ ಮಾಡಿ ಮರಳು ಸಾಗಣೆ ಮಾಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು, ಬೆಳ್ತಂಗಡಿ, ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಅಕ್ರಮವಾಗಿ ಮರಳು ಸಾಗಿಸಲು ಆರೋಪಿಗಳು ಬಳಸಿದ್ದ ಪರವಾನಗಿಗಳನ್ನು ಪರಿಶೀಲಿಸಿದಾಗ ಚಿಕ್ಕಮಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಈ ಪರವಾನಗಿಗಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿರುವುದು ಕಂಡುಬಂದಿತ್ತು.

ಈ ಪರವಾನಗಿಗಳನ್ನು ಬಳಸಿಕೊಂಡು ದಕ್ಷಿಣಕನ್ನಡ ಜಿಲ್ಲೆಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಚಿಕ್ಕಮಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆಗಾಗಿ ಸಾಕ್ಷ್ಯಾಧಾರ ಸಂಗ್ರಹಿಸಲು ಹಾಗೂ ಆರೋಪಿಗಳು ಸಾಕ್ಷ್ಯಾಧಾರ ನಾಶ ಮಾಡುವುದನ್ನು ತಡೆಯುವ ಉದ್ದೇಶದಿಂದ ಮಂಗಳವಾರ ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಸುದ್ದಿಗಾರರಿಗೆ ತಿಳಿಸಿದರು.

ಮರಳು ಸಾಗಣೆಗೆ ನೀಡುವ ಪರವಾನಗಿ ಪತ್ರದಲ್ಲಿ ಹಾಲೋಗ್ರಾಂ ಇರುತ್ತದೆ. ಇದನ್ನು ನಕಲು ಮಾಡುವುದು ಸಾಧ್ಯವಿಲ್ಲ. ಆದರೆ, ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯ ಕೆಲ ಅಧಿಕಾರಿಗಳ ಜತೆ ನಂಟು ಬೆಳೆಸಿದ ಆರೋಪಿಗಳು ಮಿನರಲ್‌ ಡಿಸ್ಪ್ಯಾಚ್‌ ಪರ್ಮಿಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಪರವಾನಗಿ ಪತ್ರಗಳನ್ನು ಬಳಸಿಕೊಂಡು ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಆರೋಪಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಗೋವಾ ಸೇರಿದಂತೆ ಬೇರೆ ಕಡೆಗೆ ಸಾಗಿಸಿದ್ದಾರೆ. ಬರೀ ಪರವಾನಗಿ ಪತ್ರವನ್ನಷ್ಟೇ ಪರಿಶೀಲಿಸುತ್ತಿದ್ದ ಪೊಲೀಸರಿಗೆ ಈ ಅಕ್ರಮದ ಸುಳಿವು ಸಿಕ್ಕಿರಲಿಲ್ಲ. ಒಂದು ಪರವಾನಗಿಯಲ್ಲಿ ಒಮ್ಮೆ ಮರಳು ಸಾಗಿಸಿದ ನಂತರ ಆ ಪರವಾನಗಿ ಪತ್ರದ ಸಾಲುಗಳನ್ನು ಲಿಕ್ವಿಡ್‌ ಮೂಲಕ ಅಳಿಸಿ ತಾವೇ ಅದರ ಮೇಲೆ ರೂಟ್‌ ಬರೆದುಕೊಂಡು ಮತ್ತೊಂದು ಲೋಡ್‌ ಮರಳು ಸಾಗಿಸುತ್ತಿದ್ದರು. ಇತ್ತೀಚೆಗೆ ಬೆಳ್ತಂಗಡಿಯಲ್ಲಿ ದಾಖಲಾದ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಿಕ್ಕಮಗಳೂರಿಗೆ ಸೇರಿದ ಮಿನರಲ್‌ ಡಿಸ್ಪ್ಯಾಚ್‌ ಪರ್ಮಿಟ್‌ನ್ನು ಅಕ್ರಮ ಮರಳು ಸಾಗಣೆಗೆ ಬಳಸುತ್ತಿರುವುದು ಕಂಡುಬಂದಿತ್ತು.

ಪರಿಶೀಲನೆ ಸಂದರ್ಭ ಚಿಕ್ಕಮಗಳೂರಿನ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿಯಿಂದ 4 ಸಾವಿರ ಮಿನರಲ್‌ ಡಿಸ್ಪ್ಯಾಚ್‌ ಪರ್ಮಿಟ್‌ಗಳನ್ನು ಆರೋಪಿಗಳಿಗೆ ನೀಡಿರುವುದು ತಿಳಿದುಬಂದಿದೆ. ಇದರಿಂದ ಸರಕಾರಕ್ಕೆ ಅಂದಾಜು 12ರಿಂದ 15 ಕೋಟಿ ರೂ. ನಷ್ಟವಾಗಿರುವ ಸಾಧ್ಯತೆ ಇದೆ. 7 ಆರೋಪಿಗಳಲ್ಲಿ ಒಬ್ಬರು ಕಾರ‍್ಯಪಾಲಕ ಎಂಜಿನಿಯರ್‌, ಒಬ್ಬರು ಸಹಾಯಕ ಕಾರ‍್ಯಪಾಲಕ ಎಂಜಿನಿಯರ್‌, ಇಬ್ಬರು ದ್ವಿತೀಯ ದರ್ಜೆ ಸಹಾಯಕರು, ಇಬ್ಬರು ಡಿ ದರ್ಜೆ ನೌಕರರು ಹಾಗೂ ಒಬ್ಬ ಗುತ್ತಿಗೆದಾರ ಇದ್ದಾರೆ. ಬೆಳ್ತಂಗಡಿಯಲ್ಲಿ ಎಫ್‌ಐಆರ್‌ ದಾಖಲಾದ ನಂತರ ಪ್ರಕರಣದಿಂದ ತಪ್ಪಿಸಿಕೊಳ್ಳಲು ಕೆಲವರು ಪತ್ರ ವ್ಯವಹಾರ ನಡೆಸಿದ್ದಾರೆ.


Spread the love