ಅಕ್ರಮ ಮರಳು, ಹಲ್ಲೆ ಪ್ರಕರಣ: ಬಿಜೆಪಿ ಜಿಪಂ ಸದಸ್ಯ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು
ಉಡುಪಿ: ಸೀತಾನದಿಯಲ್ಲಿ ಅಕ್ರಮ ಮರಳು ಸಾಗಾಟ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಉಡುಪಿ ಜಿಪಂ ಬಿಜೆಪಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಸೇರಿದಂತೆ ಹಲವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ವೆ ಗುಮ್ಮಹೊಲ ನಿವಾಸಿ ಸುಧೀರ್ ಶೆಟ್ಟಿ (20) ಎಂಬವರು ನಿಶಾ ಫ್ರಾನ್ಸಿಸ್ ಹಾಗೂ ಫ್ರಾನ್ಸಿಸ್ ಜಾರ್ಜ್ ರವರಿಗೆ ಸೇರಿದ ಉಡುಪಿ ತಾಲೂಕು ನಂಚಾರು ಗ್ರಾಮದ ಸರ್ವೆ ನಂ 129 ರಲ್ಲಿ 10 ಎಕ್ರೆ ರಬ್ಬರ್ ಪ್ಲಾಂಟೇಶನ್ ನಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿದ್ದು ಅಪರಿಚಿತ ವ್ಯಕ್ತಿಗಳು ಪ್ಲಾಂಟೇಶನ್ ನ ಗೇಟ್ ಹಾಗೂ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಸೀತಾನದಿಯಿಂದ ಜೆಸಿಬಿ ಮತ್ತು ಟಿಪ್ಪರ್ ಮೂಲಕ ಅಕ್ರಮವಾಗಿ ಮರಳು ಸಾಗಾಟ ಮಾಡಿರುವುದು ಕಂಡು ಬಂದಿದ್ದು ಮಾಲೀಕರಿಗೆ ವಿಷಯ ತಿಳಿಸಿದಾಗ ರಾತ್ರಿ ಗೇಟಿಗೆ ಬೀಗ ಹಾಕಿ ಕಾವಲು ಕಾಯುವಂತೆ ತಿಳಿಸಿದ್ದು ಅದರಂತೆ 18/02/2019 ರಂದು ರಾತ್ರಿ ಟಿಪ್ಪರ್ ನಂಬ್ರ KA-20-C-4120, KA-20-C-0900, KA-20-C-3277 ಹಾಗೂ ಜೆಸಿಬಿ ಹಾಗೂ ಕಾರು ನಂಬ್ರ KA-20-MB-7353, KA-19-MD-9890, KA-20-P-5880, KA-20-6013 ನೇ ವಾಹನಗಳ ಮೂಲಕ ಆರೋಪಿತರಾದ ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಪ್ರವೀಣ್ ಹೆಗ್ಡೆ ಮಾರಾಳಿ, ವಿಜಯ ಶೆಟ್ಟಿ ಗೋಳಿಯಂಗಡಿ ಯಳಂತೂರು, ಸುದೀಫ್ ಶೆಟ್ಟಿ ಹಳ್ಳಿ, ದಿನೇಶ್ ಶೆಟ್ಟಿ ನಂಚಾರು @ ಗುಂಡ , ದಯಾನಂದ ಶೆಟ್ಟಿ @ ಗುಂಡ ರವರು ಹಾಗೂ ಇತರರು ಇದ್ದು ಗೇಟಿನ ಬೀಗವನ್ನು ಮುರಿದು ಅಕ್ರಮವಾಗಿ ಒಳಗೆ ಪ್ರವೇಶಿಸಿ ಹೊಳೆಯಿಂದ ಮರಳನ್ನು ತೆಗೆಯಲು ಆರಂಭಿಸಿದ್ದು ಸುಧೀರ್ ಶೆಟ್ಟಿ ಯವರು ವಾಹನದ ಶಬ್ದ ಕೇಳಿ ರೂಮಿನಿಂದ ಹೊರಗೆ ಬಂದು ನೋಡಿ ಮಾಲೀಕರಿಗೆ ವಿಷಯ ತಿಳಿಸಿದ್ದು ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಅವರ ಕೈಯಲ್ಲಿರುವ ಟಾರ್ಚ್ ಹಗೂ ಮೊಬೈಲ್ ನ್ನು ಕಸಿದುಕೊಂಡು ದೂಡಿ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು ಸ್ಥಳಕ್ಕೆ ಬಂದ ಮಾಲೀಕರ ಸ್ನೇಹಿತ ರಮೇಶ್ ಶೆಟ್ಟಿರವರಿಗೆ ಬೆದರಿಸಿ ಮರಳು ಸಹಿತ ವಾಹನಗಳ ಮೂಲಕ ಪರಾರಿಯಾಗಿರುತ್ತಾರೆ ಎಂದು ಕೋಟ ಠಾಣೆಯಲ್ಲಿ ಸುಧೀರ್ ಶೆಟ್ಟಿ ದೂರು ನೀಡಿದ್ದಾರೆ.
ಆರೋಪಿಗಳು ಹೊಳೆಯ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿ ಸರಕಾರಕ್ಕೆ 10,00,000 ರೂ. ಅಧಿಕ ನಷ್ಟವನ್ನುಂಟು ಮಾಡಿರುವುದಾಗಿ ಸುಧೀರ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.