ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪ: 15 ಇರಾನ್ ಪ್ರಜೆಗಳನ್ನು ಬಂಧಿಸಿದ ಕೋಸ್ಟ್ ಗಾರ್ಡ್
ಮಂಗಳೂರು: ಭಾರತೀಯ ಜಲಸೀಮೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಎರಡು ಇರಾನ್ ಮೂಲದ ಬೋಟ್ಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ವಶಪಡಿಸಿಕೊಂಡಿದ್ದು, 15 ಮಂದಿಯನ್ನು ಸಿಎಸ್ಪಿ ಮಂಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರನ್ನು ಇರಾನ್ ಪ್ರಜೆಗಳಾದ ಅಝಂ ಅನ್ಸಾರಿ, ಅಬೂಬಕರ್ ಅನ್ಸಾರಿ ಮೀಯಾ, ಮೂಸಾ ದೆಹದಾನಿ, ಶಿದ್ ಬಾಚೂ, ಅಬ್ದುಲ್ ಮಜೀದ್, ಮಜೀದ್ ರಹ್ಮಾನಿ ದಾವೂದ್, ಮುಹಮ್ಮದ್ ಇಸ್ಹಾಕ್, ಕರೀಂ ಬಕ್ಷ್ ದೂರ್ಜಾದೆ, ಮುಹಮ್ಮದ್ ಬಲೂಚ್, ಬಮನ್, ಅಬ್ದುಲ್ ಘನಿ ಬಾಪೂರ್, ನಸೀರ್ ಭದ್ರುಜ್, ಅನ್ವರ್ ಬಲೂಚು, ನಬಿ ಬಕ್ಷ್ ಹಾಗೂ ಯೂಸುಫ್ ಜಹಾನಿ ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ.14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಭಾರತೀಯ ಕೋಸ್ಟ್ಗಾರ್ಡ್ನವರು ಅಕ್ಟೋಬರ್ 21ರಂದು ಗಸ್ತು ನಡೆಸುತ್ತಿದ್ದ ವೇಳೆ ಲಕ್ಷದ್ವೀಪದ ಬಳಿ ಭಾರತೀಯ ಜಲಸೀಮೆಯನ್ನು ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಇರಾನ್ ದೇಶದ ಎರಡು ಬೋಟ್ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರ ಸಹಿತ ಆ ಎರಡು ಬೋಟ್ಗಳನ್ನು ಕೋಸ್ಟ್ಗಾರ್ಡ್ ವಶಪಡಿಸಿಕೊಂಡು ಮಂಗಳೂರು ನವಬಂದರ್ ಕಡೆಗೆ ಬರುತ್ತಿದ್ದ ವೇಳೆ ಒಂದು ಬೋಟ್ ತಾಂತ್ರಿಕ ಸಮಸ್ಯೆಯಿಂದ ಮುಳುಗಡೆಯಾಗಿದೆ. ಬಳಿಕ ಅದರಲ್ಲಿದ್ದ ಮೀನುಗಾರರನ್ನು ಕೋಸ್ಟ್ಗಾರ್ಡ್ನವರು ವಶಪಡಿಸಿಕೊಂಡ ಇನ್ನೊಂದು ಬೋಟ್ನಲ್ಲಿ ನವಮಂಗಳೂರು ಬಂದರಿಗೆ ಕರೆತಂದಿದ್ದಾರೆ.
ಈ ಬಗ್ಗೆ ನವಮಂಗಳೂರಿನಲ್ಲಿರುವ ಇಂಡಿಯನ್ ಕೋಸ್ಟ್ ಗಾರ್ಡ್ನ ಡೆಪ್ಯೂಟಿ ಕಮಾಂಡೆಂಟ್ ಕುಲದೀಪ್ ಶರ್ಮಾ ಅವರು ಅ.31ರಂದು ಸಿಎಸ್ಪಿ ಮಂಗಳೂರು ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ.