ಅಕ್ರಮ ಸ್ಕಿಲ್ ಗೇಮ್ ಕೇಂದ್ರಕ್ಕೆ ಹಠಾತ್ ಧಾಳಿ ಮಾಡಿದ ಮೇಯರ್ ಕವಿತಾ ಸನೀಲ್
ಮಂಗಳೂರು: ನಗರದ ಡಾ. ಅಂಬೇಡ್ಕರ್ ವೃತ್ತ ಬಳಿಯ ಕಟ್ಟಡವೊಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸ್ಕಿಲ್ ಗೇಮ್ ಕೇಂದ್ರಕ್ಕೆ ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನೀಲ್ ಹಾಗೂ ಅವರ ತಂಡ ಹಠಾತ್ ಧಾಳಿ ನಡೆಸಿ ಕೇಂದ್ರಕ್ಕೆ ಬೀಗ ಜಡಿದರು.
ಮಹಿಳೆಯೊಬ್ಬರು ತನ್ನ ಮಗ ನಿತ್ಯ ಮನೆಯಿಂದ ಹಣ ತೆಗೆದುಕೊಂಡು ಹೋಗಿ ನಗರದ ಜ್ಯೋತಿ ಬಳಿ ಇರುವ ಸ್ಕಿಲ್ ಗೇಮಿನಲ್ಲಿ ವ್ಯಯಿಸುತ್ತಿದ್ದಾನೆ ಎಂಬ ದೂರಿನ ಮೇರೆಗೆ ಮೇಯರ್ ಅವರು ಅನೀರೀಕ್ಷಿತ ಧಾಳಿ ನಡೆಸಿದ ವೇಳೆಗೆ ಅನಧಿಕೃತ ಸ್ಕಿಲ್ ಗೇಮ್ ಸೆಂಟರ್ ಕಾರ್ಯಾಚರಿಸುತ್ತಿರುವುದು ಕಂಡು ಬಂದಿದೆ. ಧಾಳಿಯ ಸಮಯದಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ಗೇಮಿನಲ್ಲಿ ನಿರತರಾಗಿರುವುದು ಕಂಡು ಬಂದಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ಕವಿತಾ ಸನೀಲ್ ಮಹಾನಗರ ಪಾಲಿಕೆಯ ವತಿಯಿಂದ ಉದ್ಯಮ ಪರವಾನಿಗೆ ಪತ್ರ ಪಡೆಯದೆ ನಡೆಸುತ್ತಿದ್ದ ಸ್ಕಿಲ್ ಗೇಮ್ ಅಡ್ಡೆಗೆ ಧಾಳಿ ನಡೆಸಲಾಗಿದ್ದು, ಯಾವುದೇ ಅನುಮತಿ ಪಡೆಯದೆ ಪಾರ್ಕಿಂಗ್ ಪ್ರದೇಶದಲ್ಲಿ ನಡೆಸಲಾಗುತ್ತಿತ್ತು. ಈ ಕುರಿತು ಪೋಲಿಸರಿಗೆ ಕೂಡ ಮಾಹಿತಿ ನೀಡಲಾಗಿದೆ. ತಾವು ಧಾಳಿ ನಡೆಸುತ್ತಿರುವ ವೇಳೆ ಸುಮಾರು 500 ವಿದ್ಯಾರ್ಥಿಗಳು ತಮ್ಮ ಪೋಷಕರು ಕಷ್ಟಪಟ್ಟು ದುಡಿದು ನೀಡಿದ ಹಣವನ್ನು ಇಲ್ಲಿ ತಂದು ಆಟವಾಡಿ ಪೋಲು ಮಾಡುತ್ತಿರುವುದು ಕಂಡುಬಂದಿದೆ. ಇದರ ಪರಿಣಾಮವಾಗಿ ಹಲವಾರು ಕುಟುಂಬಗಳು ಸಮಸ್ಯೆಯನ್ನು ಎದುರಿಸುತ್ತಿವೆ ಎಂದರು.
ಪೋಲಿಸರಿಲ್ಲದೆ ಧಾಳಿ ನಡೆಸಿದ ಕುರಿತು ಕೇಳಿದ ಪ್ರಶ್ನೆಗೆ ಕಟ್ಟಡದಲ್ಲಿ ಮನಾಪದ ಪರವಾನಿಗೆ ಇಲ್ಲದೆ ಸ್ಕಿಲ್ ಗೇಮ್ ನಡೆಯುತ್ತಿದ್ದು ಇದರ ಬಗ್ಗೆ ಪರಿಶೀಲನೆ ನಡೆಸಲು ಬಂದಿದ್ದು, ಸ್ಕಿಲ್ ಗೇಮ್ ಸೆಂಟರ್ ನಗರದ ಹೃದಯ ಭಾಗದಲ್ಲಿ ನಡೆಯುತ್ತಿದೆ ಆದರೂ ಇದು ಪೋಲಿಸರ ಗಮನಕ್ಕೆ ಬಂದಿಲ್ಲ ಎನ್ನುವುದು ಖೇದಕರ. ಪೋಲಿಸರು ಈ ಕುರಿತು ಎಚ್ಚರಿಕೆಯಿಂದ ಇದ್ದಿದ್ದರೆ ಇಂತಹ ಅನಧಿಕೃತ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಈ ಬಗ್ಗೆ ಪೋಲಿಸರು ಇನ್ನಾದರೂ ಗಮನ ಹರಿಸುವುದರೊಂದಿಗೆ ಪೋಷಕರು ಸಹ ತಮ್ಮ ಮಕ್ಕಳ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.