ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ
ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 69ನೇ ಸ್ಥಾಪನ ದಿವಸ್ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ನಗರದ ಕೊಡಿಯಾಲ್‍ಬೈಲ್ ನಲ್ಲಿರುವ ಪರಿಷತ್ತಿನ ಕಾರ್ಯಲಯದಲ್ಲಿ ಇಂದು ಬೆಳಗ್ಗೆ ಆಚರಿಸಲಾಯಿತು. ಧ್ವಜಾರೋಹಣವನ್ನು ಅ.ಭಾ.ವಿ.ಪ ಮಂಗಳೂರು ವಿಭಾಗ ವ್ಯವಸ್ಥಾ ಪ್ರಮುಖರಾದ ಕೆ. ರಮೇಶ್‍ರವರು ಹಾಗು ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹಿತೇಶ್ ಬೇಕಲ್ ನೆರೆವೇರಿಸಿದರು. ನಂತರ “ ವಿವೇಕ ” ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕೆ ರಮೇಶ್‍ರವರು ಹಾಗು ಜಿಲ್ಲಾ ಸಂಚಾಲಕ್ ಸುದಿತ್‍ರವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುದಿತ್‍ರವರು, ಅ.ಭಾ.ವಿ.ಪ ಸ್ಥಾಪನೆಯ ಉದ್ದೇಶ, ಕಳೆದ 69 ವರ್ಷಗಳಿಂದ ಬೆಳೆದು ಬಂದ ಹಾದಿ, ಸಾ.ಮ ಜಗನ್ ಮೋಹನ್ ರೆಡ್ಡಿ, ಸಚ್ಚಿನ್ ಗೋಪಲನ್, ವಿಶಾಲ್ ಕುಮಾರ್ ಹೀಗೆ ಮೊದಲಾದ ಕಾರ್ಯಕರ್ತರ ಬಲಿದಾನ, ಸಂಘಟನೆಯ ಇಂದಿನ ವಿಸ್ತಾರದ ಬಗ್ಗೆ ಮಾಹಿತಿ ನೀಡಿದರು. ಅಂದು 1949ರಲ್ಲಿ ಕೇವಲ 5 ಜನರಿಂದ ಪ್ರಾರಂಭವಾದ ಸಂಘಟನೆ ಇಂದು ದೇಶದ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿ ಪಶ್ಚಿಮದ ಗುಜರಾತ್‍ನಿಂದ ಪೂರ್ವದ ಅರುಣಾಚಲ, ನಾಗಲ್ಯಾಂಡ್, ಮಣಿಪುರದವರಗೆ ಬೃಹತ್ ಸಂಘಟನೆಯಾಗಿ ಬೆಳೆದು ವಿಶ್ವದ ಅಗ್ರಗಣ್ಯ ಹಾಗು ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದರು.
ಮುಖ್ಯ ಅತಿಥಿಯಾದ ಶ್ರೀ ಕೆ ರಮೇಶ್‍ರವರು ಮಾತನಾಡಿ, ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಸದಸ್ಯತ್ಯ ಹೊಂದಿರುವ ಅ.ಭಾ.ವಿ.ಪದ ಜವಬ್ದಾರಿ ಹಿಂದೆದಿಗಿಂತಲೂ ಹೆಚ್ಚಿದೆ. ಇಂದು ದೇಶದ ಹಲವು ಕ್ಯಾಂಪಸ್‍ಗಳಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆ ಪ್ರಾರಂಭವಾಗಿದೆ. ಜೆ.ಎನ್.ಯು, ಜಾಧವ್‍ಪುರ್ ವಿವಿ, ಬೆಂಗಳೂರಿನಲ್ಲಿ ನಡೆದ ಅಮ್ನೇಸ್ಟಿ ಇಂಟರ್‍ನ್ಯಾಶನಲ್ ಸಂಸ್ಥೆ ನಡೆಸಿದ ಚಟುವಟಿಕೆ ಇದಕ್ಕೆ ಉದಾಹರಣೆಯಾಗಿದೆ. ಹಾಗಾಗಿ ಇಂದು ದೇಶದ ಪ್ರತಿ ಕ್ಯಾಂಪಸ್‍ನ ವಿದ್ಯಾರ್ಥಿಗಳಲ್ಲಿ ಪ್ರಖರ ರಾಷ್ಟ್ರೀಯತೆ ಮೂಡಿಸುವ ಚಟುವಟಿಕೆ ಅ.ಭಾ.ವಿ.ಪ ನಡೆಸಬೇಕು ಎಂದರು. ಅ.ಭಾ.ವಿ.ಪ ಮೊದಲಿಂದಲೂ ಪಕ್ಷ ರಾಜಕಾರಣದಿಂದ ದೂರ ಉಳಿದು ರಾಷ್ಟ್ರೀಯ ಸುರಕ್ಷತೆ, ಕಾಶ್ಮೀರ ಉಳಿಸಿ, ಅಸ್ಸಾಂ ಉಳಿಸಿ, ಬಾಂಗ್ಲ ನುಸುಳುಕೋರರ ವಿರುದ್ಧ ಆಂದೋಲನ, ಭ್ರಷ್ಟಾಚಾರ ವಿರೋಧಿ ಅಭಿಯಾನ ಮೊದಲಾದ ಚಟುವಟಿಕೆಗಳ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸಕ್ರೀಯವಾಗಿದೆ. ಅ.ಭಾ.ವಿ.ಪ ಕಾರ್ಯಕರ್ತರಿಗೆ 1949ರಿಂದ ಇಂದಿನವರೆಗೂ ಸ್ವಾಮಿ ವಿವೇಕಾನಂದರೇ ಆದರ್ಶ, ಹಾಗಾಗಿಯೇ ಮೊದಲಿಂದಲೂ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವೇಕಾನಂದರ ಭಾವಚಿತ್ರ ಇರುತ್ತದೆಯೇ ಹೊರತು ಯಾವ ರಾಜಕಾರಣಿಯ ಚಿತ್ರವಿರುವುದಿಲ್ಲ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿಭಾಗ ಸಂಚಾಲಕ್ ಶ್ರೀ ಚೇತನ್ ಪಡೀಲ್ ಉಪಸ್ಥಿತರಿದ್ದರು. ಶೀತಲ್ ಕುಮಾರ್ ನಿರೂಪಿಸಿ, ಎಸ್.ಡಿ.ಎಂ ವಿದ್ಯಾರ್ಥಿ ಸಾಹಿಲ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಯನ ವೃತ್ತ ಪ್ರಮುಖ್ ಚೈತನ್ಯ ವಂದೇ ಮಾತರಂ ಹಾಡಿದರು. ವಿನಿತ್, ರಕ್ಷಿತ್, ಕೆನರಾ ಕಾಲೇಜಿನ ಕು|| ಸೌಂದರ್ಯ, ಕು|| ವಿದ್ಯಾ, ಕು|| ಅನ್ವಿತಾ, ಶರುಲ್ ಗೆವಿನ್, ಸಂಕೇತ್, ರಾಜೇಂದ್ರ, ನವೀನ್ ಸೇರಿದಂತೆ ನಗರದ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.