ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಮೋದಿ ಸರಕಾರ ವಿಫಲ; ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಖಂಡನೆ
ಉಡುಪಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು. ಇದನ್ನು ಉಡುಪಿ ಜಿಲ್ಲಾ ಎನ್.ಎಸ್.ಯು.ಐ( NSUI) ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಆಲ್ಮೇಡಾ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು “ಅಚ್ಛೇ ದಿನ್” ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿದೆ ಅಂತರಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದಾಗಲೂ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಲಿಲ್ಲ. ಹಾಗಾಗಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗಿಲ್ಲ.
ಇದೀಗ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಗದಾಪ್ರಹಾರ ನಡೆಸಲಾಗುತ್ತಿದೆ. ಅಕ್ಕಿ,ಬೇಳೆ,ಎಣ್ಣೆ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡುವಲ್ಲೂ ಕೆಂದ್ರ ಸರ್ಕಾರ ವಿಫಲವಾಗಿದ್ದು, ಜನವಿರೋಧಿ ನೀತಿ ಅನುಸರಿಸುತ್ತಿದೆ.
ಪೆಟ್ರೋಲಿಯಂ ಸಚಿವಾಲಯ ಅಂತರಾಷ್ಟ್ರೀಯ ಮಾರುಕಟ್ಟೆಯ ತೈಲ ಬೆಲೆಗನುಗುಣವಾಗಿ ಅಬಕಾರಿ ಸುಂಕವನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರೂ ಆ ಬಗ್ಗೆ ಗಮನ ಹರಿಸದ ಸರ್ಕಾರ ಜನಸಾಮಾನ್ಯರು ತತ್ತರಿಸುವಂತೆ ಮಾಡಿದೆ.
ಇದರಿಂದಾಗಿ ಪೆಟ್ರೋಲ್ ಡೀಸೆಲ್ ಬೆಲೆ ನಾಲ್ಕು ವರ್ಷಗಳಲ್ಲೇ ಗರೀಷ್ಟ ಮಟ್ಟವನ್ನು ತಲುಪಿದೆ ತೈಲಬೆಲೆಗನುಗುಣವಾಗಿ ಅಬಕಾರಿ ಸುಂಕವನ್ನು ಪರಿಷ್ಕರಿಸಿದಲ್ಲಿ ಈಗಿರುವ ಬೆಲೆಗಿಂತ ಶೇ.20-30 ರಷ್ಟು ಕಡಿಮೆ ಬೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಗ್ರಾಹಕರಿಗೆ ದೊರೆಯುತ್ತದೆ. ಆದರೆ ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ದೈನಂದಿನ ಜೀವನ ಉತ್ತಮಗೊಳಿಸುವುದು ಬೇಡವಾಗಿರುವುದರಿಂದ ಅಬಕಾರಿ ಸುಂಕವನ್ನು ಪರಿಗಣಿಸುತ್ತಿಲ್ಲ.
ಇದು ಆಹಾರ ಪದಾರ್ಥಗಳು ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕೈಬಿಡಬೇಕು ಕೂಡಲೇ ಅಂತರಾಷ್ಟ್ರೀಯ ತೈಲಬೆಲೆಗನುಗುಣವಾಗಿ ಪೆಟ್ರೋಲ್-ಡೀಸೆಲ್‍ಗೆ ಅಬಕಾರಿ ಸುಂಕವನ್ನು ಪರಿಷ್ಕರಿಸಬೇಕು ಇಲ್ಲವಾದಲ್ಲಿ ಕೇಂದ್ರ ಸರ್ಕಾರದ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಛರಿಸಿದ್ದಾರೆ.