ಅಗಸ್ಟ್ 10 ರಂದು ಬೊಂದೆಲ್ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
ಮಂಗಳೂರು: ಸಂತ ಲಾರೆನ್ಸರಿಗೆ ಸಮರ್ಪಿಸಿದ ಧರ್ಮಕೇಂದ್ರ ಹಾಗೂ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಇದೇ ಆಗಸ್ಟ್ 10 ರಂದು ಗುರುವಾರ ವಿಜೃಂಭಣೆಯಿಂದ ನಡೆಯಲಿದೆ ಎಂದು ಪುಣ್ಯಕ್ಷೇತ್ರದ ಧರ್ಮಗುರುಗಳಾದ ವಂ ಆ್ಯಂಡ್ರು ಡಿ’ಸೋಜಾ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ಸಂತ ಲಾರೆನ್ಸರಂತೆ ನಾವು ದೇವರ ವಾಕ್ಯದ ಸಾಕ್ಷಿಗಳಾಗೋಣ’ ಇದು ಈ ವರ್ಷದ ಮಹೋತ್ಸವದ ಸಂದೇಶವಾಗಿದೆ.ಮಹೋತ್ಸವಕ್ಕೆ ತಯಾರಿಯಾಗಿ ಒಂಬತ್ತು ದಿನಗಳ ನವೆನಾ ಪ್ರಾರ್ಥನೆಯು ಆಗಸ್ಟ್ 1 ರಿಂದ 9 ರ ತನಕ ನಡೆಯಲಿರುವುದು. ಆಗಸ್ಟ್ 1 ರಂದು ಮಂಗಳವಾರ ಬೆಳಗ್ಗೆ 10.30 ಗಂಟೆಗೆ ನವೆನಾ ಕಾರ್ಯಕ್ರಮದ ಉದ್ಘಾಟನೆಯು ನೆರವೇರಲಿರುವುದು. ನವೆನಾದ ಬಲಿಪೂಜೆಯು ದಿನಂಪ್ರತಿ ಬೆಳಿಗ್ಗೆ 11 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ಇರುವುದು. ನವೆನಾದ ದಿನಗಳಲ್ಲಿ ಬೆಳಗ್ಗಿನ ನವೆನಾದ ನಂತರ ಭಕ್ತಾಧಿಗಳಿಗೆ ‘ಅನ್ನಸಂತರ್ಪಣೆ’ ಇರುವುದು. ಪ್ರತಿ ದಿನ ನವೆನಾ ಪ್ರಾರ್ಥನೆಯ ಬಳಿಕ ಧರ್ಮಗುರುಗಳು ಭಕ್ತಾಧಿಗಳ ಶಿರದ ಮೇಲೆ ಕೈಯನ್ನಿಟ್ಟು ಪ್ರಾರ್ಥಿಸುವರು.
9 ದಿನಗಳ ನವೆನಾ ಪ್ರಾರ್ಥನಾ ಕಾರ್ಯಕ್ರಮದಲ್ಲಿ ವಿವಿಧ ಕೋರಿಕೆಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಅಗಸ್ಟ್ 9 ರಂದು ಬುಧವಾರ ನವೆನಾ ಕಾರ್ಯಕ್ರಮದ ಸಮಾರೋಪ ಸಂಭ್ರಮವು ನಡೆಯಲಿರುವುದು. ಆ ದಿನ ಸಂಜೆ 6 ಗಂಟೆಗೆ ಮಂಗಳೂರು ಸಂತ ಅಲೋಶೀಯಸ್ ಕಾಲೇಜಿನ ರೆಕ್ಟರ್ ವಂ| ಫಾ| ಡಯೋನಿಸಿಯಸ್ ವಾಸ್, ಎಸ್.ಜೆ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ಅರ್ಪಿಸುವರು.
ಮಹೋತ್ಸವದ ವಿಶೇಷ ಕಾರ್ಯಕ್ರಮವಾಗಿ ಜುಲಾಯಿ 31 ರಂದು, ಸೋಮವಾರ ಸಂಜೆ 5.30 ಗಂಟೆಗೆ ಮೇರಿಹಿಲ್ಲ್ ಮೌಂಟ್ ಕಾರ್ಮೆಲ್ ಶಾಲಾ ಬಳಿಯಿಂದ ಬೊಂದೆಲ್ ಚರ್ಚಿಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಅಗಸ್ಟ್ 10 ರಂದು ಗುರುವಾರ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ಬೆಳಿಗ್ಗೆ 10 ಗಂಟೆಗೆ ಇರುವುದು. ಮಂಗಳೂರು ಧರ್ಮಕೇಂದ್ರದ ಧರ್ಮಾಧ್ಯಕ್ಷರಾದ ಅತೀ ವಂ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜ ಭಕ್ತಾದಿಗಳೊಂದಿಗೆ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ಅರ್ಪಿಸುವರು. ಅದೇ ದಿನ ಸಂಜೆ 6 ಗಂಟೆಗೆ ಇನ್ನೊಂದು ಬಲಿಪೂಜೆ ಇರುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹೆನ್ಬರ್ಟ್ ಪಿಂಟೊ, ಫ್ರಾನ್ಸಿಸ್ ವೇಗಸ್ , ರುಡಾಲ್ಫ್ ಪಿಂಟೊ, ಸ್ಟ್ಯಾನಿ ಅಲ್ವಾರಿಸ್ , ವಿಲ್ಫ್ರೆಡ್ ಅಲ್ವಾರಿಸ್ , ಲ್ಯಾನ್ಸಿ ಡಿಕುನ್ಹಾ ಉಪಸ್ಥಿತರಿದ್ದರು.