ಅಗಸ್ಟ್ 5ರಂದು ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ
ಉಡುಪಿ: ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 5ರಂದು ಬ್ರಹ್ಮಾವರ ಬಂಟರ ಭವನದಲ್ಲಿ ನಡೆಯಲಿದೆ ಎಂದು ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯುವ ಸಮಾರಂಭವನ್ನು ಆಳ್ವಾಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ. ಸಾಹಿತಿ ಜಯಂತ ಕಾಯ್ಕಿಣಿ ಅವರು ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೀತಾನಂದ ಟ್ರಸ್ಟ್ ಪ್ರವರ್ತಕ ಸಿ.ಆನಂದ ಕುಂದರ್, ಹಿರಿಯ ಪತ್ರಕರ್ತ ಗಣೇಶ್ ಪ್ರಸಾದ್ ಪಾಂಡೇಲು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
ಅಂದು ಮಧ್ಯಾಹ್ನ ‘ರಾಜಕೀಯ– ಕಾನೂನು– ಪತ್ರಿಕೋದ್ಯಮ’ ವಿಚಾರ ಕುರಿತು ಸಂವಾದ ನಡೆಯಲಿದೆ. ಕೊಪ್ಪದ ರೈತಪರ ಹೋರಾಟಗಾರ ಸುಧೀರ್ ಕುಮಾರ್ ಮುರೋಳಿ, ಮಾಜಿ ಶಾಸಕ ವೈಎಸ್‌ವಿ ದತ್ತ ಹಾಗೂ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿ ಪ್ರೆಸ್ ಕ್ಲಬ್ ಮಾಧ್ಯಮ ಮಿತ್ರರಿಂದ ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದ ಯಕ್ಷ ರೂಪಕ ‘ವೀರ ಅಭಿಮನ್ಯು’ ಹಾಗೂ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ‘ರಾಜಾರುದ್ರ ಕೋಪ’ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.
ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಗಾಣಿಗ, ಕೋಶಾಧಿಕಾರಿ ಮೋಹನ್ ಉಡುಪ, ಕಾರ್ಯಕ್ರಮ ಸಂಚಾಲಕ ವಸಂತ್ ಗಿಳಿಯಾರ್, ಗಣೇಶ್ ಸೈಬ್ರಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.