Home Mangalorean News Kannada News ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಿ -ಡಾ. ಪಿ.ವಿ.ಭಂಡಾರಿ

ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಿ -ಡಾ. ಪಿ.ವಿ.ಭಂಡಾರಿ

Spread the love

ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಿ -ಡಾ. ಪಿ.ವಿ.ಭಂಡಾರಿ

ಉಡುಪಿ: ಅಜ್ಜರಕಾಡು ಸರ್ಕಾರಿ ಆಸ್ಪತ್ರೆ ಕಡತದಲ್ಲಿ ಮಾತ್ರ ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದೆಯೇ ವಿನಹ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ಈಗ ಕೇಂದ್ರ ಹಾಗೂ ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವಿದ್ದು, ಜಿಲ್ಲೆಯ ಶಾಸಕರು, ಸಂಸದರು ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವುದರ ಜತೆಗೆ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಬೇಕು ಎಂದು ಮನೋವೈದ್ಯ ಡಾ. ಪಿ.ವಿ.ಭಂಡಾರಿ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿದಿನ 600 ಹೊರರೋಗಿಗಳು ಹಾಗೂ 150ಕ್ಕೂ ಅಧಿಕ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ 17 ವೈದ್ಯರು, 25ಕ್ಕೂ ಅಧಿಕ ದಾದಿಯರು, 30ಕ್ಕೂ ಹೆಚ್ಚು ಗ್ರೂಪ್‌ ಡಿ ನೌಕರರ ಕೊರತೆ ಇದೆ. ಹಾಗಾಗಿ ಆಸ್ಪತ್ರೆಯನ್ನು ದೂರಿ ಯಾವುದೇ ಪ್ರಯೋಜನವಿಲ್ಲ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ತಮ್ಮ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದರು.

2001ರಲ್ಲಿ ಆಸ್ಪತ್ರೆಯನ್ನು 200 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. ಆ ಬಳಿಕ 2017ರಲ್ಲಿ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಘೋಷಣೆ ಮಾಡಿದ್ದರು. ಆದರೆ, ಆಸ್ಪತ್ರೆಯ ಸಮಸ್ಯೆ ಮಾತ್ರ ಇನ್ನೂ ಪರಿಹಾರ ಆಗಿಲ್ಲ. ದಿನ ಕಳೆದಂತೆ ಆಸ್ಪತ್ರೆಯ ಸಮಸ್ಯೆಗಳು ಜಟಿಲವಾಗುತ್ತಿವೆ. ಈ ಬಗ್ಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಸಾಬೂಬು ನೀಡುತ್ತಾರೆ. ಈಗ ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಇರುವುದರಿಂದ ಜಿಲ್ಲೆಯ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಸಮಸ್ಯೆಯನ್ನು ಬಗೆಹರಿಸಲಿ ಎಂದು ಆಗ್ರಹಿಸಿದರು.

ಜಿಲ್ಲಾಸ್ಪತ್ರೆಯ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರ ಗಮನಕ್ಕೂ ತಂದಿದ್ದೇವೆ.ಈ ತಿಂಗಳ ಅಂತ್ಯಕ್ಕೆ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದು, ಆ ಸಂದರ್ಭ ಜಿಲ್ಲಾಸ್ಪತ್ರೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮೊಂದಿಗೆ ಕೈಜೋಡಿ ಸುವಂತೆ ಕರಾವಳಿ ಯೂತ್‌ ಕ್ಲಬ್‌ನ ಗೌರವಾಧ್ಯಕ್ಷ ರಮೇಶ್‌ ಕಲ್ಲೊಟ್ಟೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಯೂತ್‌ ಕ್ಲಬ್‌ನ ಅಧ್ಯಕ್ಷ ಅಶೋಕ್‌, ಕಾರ್ಯದರ್ಶಿ ಸಂದೇಶ್‌ ಶೆಟ್ಟಿ, ಸುಕೇಶ್‌ ಶೆಟ್ಟಿ, ರಾಮಾಂಜಿ ಉಪಸ್ಥಿತರಿದ್ದರು.


Spread the love

Exit mobile version