ಅಟಲ್‍ಜೀ ಜನ್ಮ ದಿನಾಚರಣೆಯಂದು ದಾಖಲೆಯ ನೇತ್ರದಾನ-ವೇದವ್ಯಾಸ ಕಾಮತ್
ಮಂಗಳೂರು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ನೇತ್ರದಾನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಾಣುವುದರೊಂದಿಗೆ ಸಮಾಜಕ್ಕೆ ಯೋಗ್ಯ ಸಂದೇಶವನ್ನು ನೀಡಿದಂತಾಗಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ್ ಕಾಮತ್ ಹರ್ಷ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ 92ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ನೇತ್ರದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಪಕ್ಷಾತೀತವಾಗಿ ಎಲ್ಲರಿಂದಲೂ ಮನ್ನಣೆ ಗಳಿಸಿದಂತಹ ದೇಶ ಕಂಡ ಅಪ್ರತಿಮ ನಾಯಕ ಅಟಲ್‍ಜೀ ಅವರ ಸಾಧನೆ ನಮಗೆಲ್ಲರಿಗೂ ಮಾದರಿ. ಆ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಎಲ್ಲರಿಗೂ ಪ್ರೇರಣೆಯಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಇತ್ತು. ನೇತ್ರದಾನದಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ದೇಶದ ಮಹಾನ್ ನಾಯಕನೊಬ್ಬನಿಗೆ ಗೌರವ ಕೊಡುವ ಕೆಲಸ ಕಾರ್ಯಕರ್ತರಿಂದ ಆಗಿದೆ. 478 ಜನ ಭಾನುವಾರ ಬಿಜೆಪಿ ಕಚೇರಿಗೆ ಬಂದು ನೇತ್ರದಾನದ ಅರ್ಜಿ ನೋಂದಾಯಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇನ್ನು ಅನೇಕ ಜನ ಮನೆಯಿಂದಲೇ ಫಾರಂ ಭರ್ತಿ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಈ ಪ್ರಕಾರವಾಗಿ ಒಟ್ಟು ಆರು ನೂರು ಜನರಿಗಿಂತಲೂ ಹೆಚ್ಚು ನಾಗರಿಕರು ಸ್ವಯಂ ಸ್ಫೂರ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯ ವಿಕ್ರಮ ಜೈನ್ ಅವರು ವೇದವ್ಯಾಸ್ ಕಾಮತ್ ಅವರಿಗೆ ಮೊದಲ ಪ್ರಮಾಣಪತ್ರ ಹಸ್ತಾಂತರಿಸಿ, ಇಂತಹ ಯೋಗ್ಯ ಕಾರ್ಯಕ್ರಮವನ್ನು ಮಾಡುವ ಮೂಲಕ ದೇಶದ ಲಕ್ಷಾಂತರ ನೇತ್ರಹೀನರ ಬದುಕಿನಲ್ಲಿ ಬೆಳಕು ತರುವ ಕೆಲಸವನ್ನು ಮಾಡಿರುವ ಎಲ್ಲರಿಗೂ ದೇಶ ಚಿರಋಣಿಯಾಗಿರುತ್ತದೆ ಎಂದು ಹೇಳಿದರು. ಈ ದೇಶದಲ್ಲಿ 45 ಲಕ್ಷ ಜನ ನೇತ್ರಹೀನತೆಯಿಂದ ಬಳಲುತ್ತಿದ್ದಾರೆ. ನಮ್ಮ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ರಕ್ತದಾನ ಮತ್ತು ಕಿಡ್ನಿದಾನದಷ್ಟೇ ಶ್ರೇಷ್ಟ ಆದರೆ ಅದಕ್ಕಿಂತಲೂ ಸುಲಭ ಕ್ರಿಯೆ ಇದರಲ್ಲಿ ಅಡಕವಾಗಿದೆ ಎಂದು ಮಾಹಿತಿ ಕೊಟ್ಟರು.
ಬಿಜೆಪಿಯ ಹಿರಿಯ ಮಾರ್ಗದರ್ಶಕ ಸುಧೀರ್ ಘಾಟೆ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು ಮತ್ತು ಸಾಧನೆ ಬಗ್ಗೆ ಮಾತನಾಡುತ್ತಾ ಎಂತಹುದೇ ಗಂಭೀರ ಸವಾಲುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮೂಲಕ ಬೇರೆ ಪಕ್ಷದ ನಾಯಕರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಅಟಲ್ ಜೀ ಹೊರಹೊಮ್ಮಿದ್ದಾರೆ. ಅವರ ಆಡಳಿತದ ವೈಖರಿಯನ್ನು ಕಂಡು ಅವರ ರಾಜಕೀಯ ವಿರೋಧಿಗಳು ಕೂಡ ಮೂಕವಿಸ್ಮಿತರಾಗುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಹಿರಿಯ ಸದಸ್ಯ ಪಾಂಡುರಂಗ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿತಿನ್ ಕುಮಾರ್, ರೂಪಾ ಡಿ ಬಂಗೇರ, ಸುಧೀರ್ ಶೆಟ್ಟಿ, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ನಮಿತ ಶ್ಯಾಂ, ಪ್ರಭಾ ಮಾಲಿನಿ, ಗ್ಲಾಡ್ವಿನ್ ಡಿಸಿಲ್ವ, ಸದಾನಂದ ನಾವರ, ಭರತ್ ಕುಮಾರ್, ಪ್ರವೀಣ್ ಕೊಡಿಯಾಲ್ ಬೈಲ್, ಸಂದೀಪ್ ಶೆಟ್ಟಿ, ಮಂಜುಳಾ ರಾವ್, ದೀಪಕ್ ಪೈ, ಗಿರೀಶ್ ಕೊಠಾರಿ, ಅನಿಲ್ ಕುಮಾರ್, ದೇವೂಜಿ ರಾವ್ ನೇತ್ರಾದಾನ ಮಾಡಿದವರಲ್ಲಿ ಪ್ರಮುಖರು.