ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ
ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಏಕೆ ಮಾಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು.
ಪಟ್ಟಣದ ಜೆಸಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಕಾಫಿ ಬೆಳೆಗಾರರಿಗೆ ವಿದರ್ಭ ಪ್ಯಾಕೇಜ್ ನೀಡಿ ಬೆಳೆಗಾರರ ಪರವಾಗಿತ್ತು.
ಯುಪಿಎ ಅವಧಿಯಲ್ಲಿಯೇ ನಾನು ಗೋರಖ್ ಸಿಂಗ್ ಅವರನ್ನು ಮಲೆನಾಡು ಭಾಗಕ್ಕೆ ಕರೆಯಿಸಿ ಅಡಕೆ ಬೆಳೆಗೆ ಇರುವ ರೋಗದ ಕುರಿತು ಸಾಧಕ ಬಾಧಕ ನೋಡಲು ತಿಳಿಸಲಾಗಿತ್ತು. ಆದರೆ ನಂತರ ಬಂದ ಬಿಜೆಪಿ ಗೋರಖ್ ಸಿಂಗ್ ವರದಿ ಜಾರಿಗೆ ಪ್ರಯತ್ನ ಪಡಲಿಲ್ಲ. ಅಡಕೆ ಅಧ್ಯಯನ ಕೇಂದ್ರ ಕ್ಷೇತ್ರದಲ್ಲಿ ಇದ್ದರೂ ಸಹ ಅದರ ಅಭಿವೃದ್ಧಿಗೆ ಮುಂದಾಗಿಲ್ಲ. ಕ್ಷೇತ್ರದ ಸಂಸದರು ಕೃಷಿ ಸಚಿವರಾಗಿದ್ದರೂ ಸಹ ಇದರ ಪ್ರಯತ್ನಕ್ಕೆ ಕೈಜೋಡಿಸಿಲ್ಲ ಎಂದು ದೂರಿದರು.
ಕ್ಷೇತ್ರದಲ್ಲಿ ಪ್ರಮುಖವಾಗಿ ಇಎಸ್‌ಐ ಆಸ್ಪತ್ರೆ ನಿರ್ಮಾಣ, ಮಲ್ಟಿಸೆಷ್ಪಾಲಿಟಿ ಆಸ್ಪತ್ರೆಗಳ ನಿರ್ಮಾಣವನ್ನು ಮಾಡಬೇಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಹತ್ವವನ್ನು ಮತದಾರರಿಗೆ ಬಿಡಿಸಿ ಹೇಳಿ ಮತವನ್ನು ಕೇಳಬೇಕಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತ ಕೇಳಬೇಕಿದೆ. ಜನರ ಸಮಸ್ಯೆಗೆ ಸ್ಪಂದಿಸುವ ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿರುವುದು ಕೇವಲ ಕಾಂಗ್ರೆಸ್ ಪಕ್ಷವಾಗಿದ್ದು, ಬಿಜೆಪಿಯವರು ದೇಶಕ್ಕಾಗಿ ಏನೂ ಮಾಡಿಲ್ಲ. ಬಿಜೆಪಿಯವರು ಸಾವಿರ ಸುಳ್ಳು ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಕೇಂದ್ರ ಸರ್ಕಾರವು ಅಂಬಾನಿ, ಆದಾನಿಯಂತಹ ಶ್ರೀಮಂತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹೊರಿಸಿದೆ. ಕಾಂಗ್ರೆಸ್ ಪಕ್ಷ ಎಂದರೆ ಹೋರಾಟ, ಸಿದ್ಧಾಂತ ಪಕ್ಷ. ಬಿಜೆಪಿ ಎಂದಿಗೂ ರೈತರ, ಜನಸಾಮಾನ್ಯರ ಪರ ನಿಲ್ಲುವುದಿಲ್ಲ ಎಂಬುದು ಅರಿಯಬೇಕಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ, ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೊಳ್ಳಿ, ಸದಸ್ಯ ಪಿ.ಆರ್.ಸದಾಶಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಚುನಾವಣಾ ವೀಕ್ಷಕ ಭಾರ್ಗವ್, ಮುಖಂಡರಾದ ಇಫ್ತೆಖಾರ್ ಆದಿಲ್, ಹೇಮಲತಾ, ಚಂದ್ರಮ್ಮ, ಹಿರಿಯಣ್ಣ, ಮಹಮ್ಮದ್ ಹನೀಫ್, ಎಂ.ಎಸ್.ಅರುಣೇಶ್, ಎಂ.ಎಸ್.ಜ ಯಪ್ರಕಾಶ್, ಸಚಿನಾ ಮೀಗಾ, ನಟರಾಜ್ ಗೇರುಬೈಲು, ಆಶಾ, ಇಬ್ರಾಹಿಂ ಶಾಫಿ, ಶಶಿಕಲಾ, ಬಿ.ಕೆ.ಮಧುಸೂದನ್, ರಾಜೇಶ್ ಕೇಶವತ್ತಿ, ಕಾರ್ತಿಕ್ ಹುಣಸೇಕೊಪ್ಪ ಮತ್ತಿತರರಿದ್ದರು.