ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ವೈಭವಯುತ ತೆರೆ
ಕಾರ್ಕಳ : ಕಳೆದ ಐದು ದಿನಗಳಿಂದ ನಡೆಯುತ್ತಿರುವ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವು ಗುರುವಾರ ವಿಧಿಯುಕ್ತವಾಗಿ ತೆರೆ ಕಂಡಿತು. ಮಹೋತ್ಸವದ ಕೊನೆಯ ದಿನವನ್ನು ಮಾರ್ಗದರ್ಶಿ ಮಾತೆಯ ಹಬ್ಬವೆಂದು ಆಚರಿಸಲಾಯಿತು.
ಬೆಳಗ್ಗಿನ ಪ್ರಮುಖ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊರವರು ನೆರವೇರಿಸಿದರು. ದೀಕ್ಷಾ ಸ್ನಾನವನ್ನು ಪಡೆದ ಪ್ರತಿಯೊಬ್ಬ ಸಾಮಾನ್ಯ ಕ್ರೈಸ್ತನು ಕೂಡ ಒಬ್ಬ ಸಂತನಾಗಿರುವನು. ದೈನಂದಿನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನೆರವೇರಿಸಿ, ನಿರ್ಮಲ ಹೃದಯವಂತರಾಗಿ ದೇವರಿಗೆ ವಿಧೇಯರಾಗಿ ಬಾಳಿದಾಗ ಬದುಕಿನಲ್ಲಿ ಪಾವಿತ್ರ್ಯತೆಯನ್ನು ಗಳಿಸಲು ಸಾಧ್ಯ ಎಂದು ಅವರು ತಮ್ಮ ಪ್ರವಚನದಲ್ಲಿ ನುಡಿದರು.
ಉಡುಪಿ ಜಿಲ್ಲಾಧಿಕಾರಿಗಳಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಅದಾನಿ ಯುಪಿಸಿಎಲ್ನ ಕಿಶೋರ್ ಆಳ್ವರವರು ಕೊನೆಯ ದಿನ ಬಸಿಲಿಕಾಕ್ಕೆ ಭೇಟಿ ನೀಡಿದರು.
ಕೊನೆಯ ದಿನದಂದು ಹತ್ತು ಬಲಿಪೂಜೆಗಳು ನಡೆದವು. ರಾತ್ರಿ 9.30 ಕ್ಕೆ ಕೊನೆಯ ದಿವ್ಯ ಬಲಿಪೂಜೆ ನೆರವೇರಿತು. ನಾನು ಪವಿತ್ರನಾಗಿರುವಂತೆ ನೀವೂ ಪವಿತ್ರರಾಗಿರಿ ಎಂಬ ಪವಿತ್ರ ಪುಸ್ತಕದ ನುಡಿಯನ್ನು ಮಹೋತ್ಸವದ ಸಂದೇಶನ್ನಾಗಿ ಆರಿಸಲಾಗಿತ್ತು. ವಾರ್ಷಿಕ ಮಹೋತ್ಸವು ಉಡುಪಿ ಧರ್ಮಾಧ್ಯಕ್ಷರ ಮಾರ್ಗದರ್ಶನದಂತೆ ನಡೆಯಿತು.
ಬಸಿಲಿಕಾದ ನಿರ್ದೇಶಕರಾದ ವಂ. ಜೋರ್ಜ್ ಡಿಸೋಜ, ಸಹಾಯಕ ಧರ್ಮಗುರು ವಂ. ಜೆನ್ಸಿಲ್ ಆಳ್ವರವರು ಚರ್ಚಿನ ಸಮಸ್ತ ಭಾಂದವರ ಸಹಕಾರದೊಂದಿಗೆ ಮಹೋತ್ಸವ ಅಚ್ಚುಕಟ್ಟಾಗಿ ನಡೆಯುವಲ್ಲಿ ಸಹಕರಿಸಿದರು. ಆರು ಧರ್ಮಾಧ್ಯಕ್ಷರು ಮತ್ತು ನಾಲ್ಕು ನೂರಕ್ಕೂ ಹೆಚ್ಚು ಧರ್ಮಗುರುಗಳು ಇಲ್ಲಿಗೆ ಭೇಟಿ ನೀಡಿ ಆಧ್ಯಾತ್ಮಿಕ ಸೇವೆಯನ್ನು ನೀಡಿದರು.
ಈ ಪುಣ್ಯ ಕ್ಷೇತ್ರವನ್ನು ಬಸಿಲಿಕಾವಾಗಿ ಘೋಷಿಸಿದ ನಂತರ ಇಲ್ಲಿಗೆ ಭೇಟಿ ನೀಡುವ ದೇಶ ವಿದೇಶಗಳ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ವ್ಯಾಧಿಶ್ಟರು, ಹರಕೆ ಹೊತ್ತವರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸಂತ ಲಾರೆನ್ಸರ ಮುಖಾಂತರ ದೇವರಲ್ಲಿ ಪ್ರಾರ್ಥಿಸಿದರು. ಪಾಪ ನಿವೇದನೆಯ ಮುಖಾಂತರ ಮನಪರಿವರ್ತನೆಗೊಂಡವರು, ಸಂತುಷ್ಟಿಯ ಭಾವದೊಂದಿಗೆ ತೆರಳಿದರು. ಈ ಬಾರಿ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.