ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾಗೆ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಗೌರವ
ಉಡುಪಿ: ವಿಶ್ವ ಪ್ರಸಿದ್ದ ಅತ್ತೂರು – ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು ಮೈನರ್ ಬಾಸಿಲಿಕಾ (ಮಹಾದೇವಾಲಯ) ಎಂದು ಘೋಷಣೆ ಮಾಡಿರುವ ಸವಿ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಯನ್ನು ಜನವರಿ 18 ರಂದು ಮಧ್ಯಾಹ್ನ 12 ಗಂಟೆಗೆ ಕಾರ್ಕಳದಲ್ಲಿ ಬಿಡುಗಡೆ ಮಾಡಲಿದೆ.
ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾ ಹಾಗೂ ಪವಾಡ ಮೂರ್ತಿಯ ವಿಶೇಶ ಕವರ್, ಹಾಗೂ ಬಾಸಿಲಿಕಾ ಲಾಂಛನದ ಕ್ಯಾನ್ಸಲೇಶನ್ (ಮೊಹರು) ಬಿಡುಗಡೆಯಾಗಲಿದ್ದು, ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿದೆ.
ಅಂಚೆ ಲಕೋಟೆಗೆ ಬಳಸಬಹುದಾದ ಸಂತ ಲಾರೆನ್ಸ್ ಬಾಸಿಲಿಕಾ ಮತ್ತು ಪವಾಡ ಮೂರ್ತಿಯ ಭಾವಚಿತ್ರವುಳ್ಳ ಮೈ ಸ್ಟ್ಯಾಂಪ್ (ರೂ 5 ಅಂಚೆ ಚೀಟಿ) ಕೂಡ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದ್ದು ಅಂಚೆ ಕಚೇರಿಗಳಲ್ಲಿ ದೊರೆಯಲಿದೆ.
ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಅತ್ತೂರು ಸಂತ ಲಾರೆನ್ಸ್ ದೇವಾಲಯವನ್ನು 2016 ಎಪ್ರಿಲ್ 26 ರಂದು ಮಹಾದೇವಾಲಯವಾಗಿ ಉನ್ನತಿಗೆ ಏರಿಸಿದ್ದು 2016, ಅಗೋಸ್ತ್ 1 ರಂದು ಇದರ ಅಧಿಕೃತ ಘೋಷಣೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆದಿತ್ತು ಇದರ ಸವಿನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಇದೊಂದು ಗೌರವವನ್ನು ಸಲ್ಲಿಸಿದ್ದು ಮುಂದಿನ ಜನಾಂಗಕ್ಕೆ ಈ ಚರ್ಚಿನ ಇತಿಹಾಸ ತಿಳಿಯಲು, ಅಧ್ಯಯನ ನಡೆಸಲು ಪೂರವಾಗಲಿದೆ ಎನ್ನುತ್ತಾರೆ ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಪ್ರಾಚೀನ ವಸ್ತು ಸಂಗ್ರಹಾಲಯದ ಎಂ. ಕೆ. ಕೃಷ್ಣಯ್ಯ, ಕ್ಯುರೇಟರ್ ಹೇಳಿದರು.
ಜನವರಿ 18ರಂದು ಮಧ್ಯಾಹ್ನ 12 ಗಂಟೆಗೆ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ನಡೆಯುವ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಇವರ ಉಪಸ್ಥಿತಿಯಲ್ಲಿ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಬಿಡುಗಡೆಗೊಳಿಸಲಿದೆ.