ಅದಮಾರು ಪರ್ಯಾಯ ಮಹೋತ್ಸವಕ್ಕೆ ಅಲಂಕಾರಗೊಂಡು ಸಿದ್ಥಗೊಂಡ ಉಡುಪಿ
ಉಡುಪಿ; ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದ್ದು ಉಡುಪಿ ನಗರ ಸಂಪೂರ್ಣ ಅಲಂಕೃತಗೊಂಡು ಸಿದ್ದಗೊಂಡಿದ್ದು ಕೊನೆಯ ಹಂತದ ತಯಾರಿಗಳು ನಡೆಯುತ್ತಿವೆ ಎಂದು ಶ್ರೀ ಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷರು ಹಾಗೂ ಉಡುಪಿ ಶಾಸಕರಾದ ರಘುಪತಿ ಭಟ್ ಹೇಳಿದರು.
ಅವರು ಗುರುವಾರ ಅದಮಾರು ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರ್ಯಾಯ ಮಹೋತ್ಸವ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಶ್ರೀಕೃಷ್ಣಾ ಸೇವಾ ಬಳಗವು ಈಗಾಗಲೇ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಿ ಸಾಕಷ್್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ಭಕ್ತಾದಿಗಳು ಉಡುಪಿಗೆ ಬರುವ ಸಂದರ್ಭದಲ್ಲಿ ಅವರಿಗೆ ಒದಗಿಸಲಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಸರಕಾರ ಮತ್ತು ಜಿಲ್ಲಾಡಳಿತದ ಮಟ್ಟದಲ್ಲಿ ಸಭೆಗಳಾಗಿವೆ. ನೂತನ ಪೊಲೀಸ್ ವರಿಷ್ಠಾಧಿಕಾರಿಯವರು ಈಗಾಗಲೇ ಸುರಕ್ಷೆ, ವಾಹನ ನಿಲುಗಡೆ, ವಾಹನಗಳ ಒಡಾಟ ಇತ್ಯಾದಿಗಳ ಬಗ್ಗೆ ಪೂರ್ವಯೋಜಿತವಾಗಿ ಸಂಪೂರ್ಣ ಸಿದ್ದತೆ ನಡೆಸಿದ್ದು, ಮೆರವಣಿಗೆ ಸಾಗವು ಜೋಡುಕಟ್ಟೆಯಿಂದ ಕಲ್ಪನಾ ಟಾಕೀಸ್ ವರೆಗೆ ರಸ್ತೆ ಸಂಪೂರ್ಣ ಡಾಮರೀಕರಣಗೊಳಿಸಲಾಗಿದೆ. ಸುಮಾರು 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಸಾಲು ಸಾಲಾಗಿ ಜೋಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹದಿನೈದು ಜಾನಪದ ತಂಡಗಳು ಉಡುಪಿಗೆ ಬರಲಿದೆ. ವಿವಿಧ ಸರಕಾರಿ ಇಲಾಖೆಯಿಂದ ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿ ಸಂದೇಶಗಳನ್ನು ಸಾರುವ ಆರು ಟ್ಯಾಬ್ಲೊ ಗಳು ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸಲಿದೆ.
ಈ ಬಾರಿ ಪರ್ಯಾಐ ಮಹೋತ್ಸವ ಮೆರವಣಿಗೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಲಾಗಿದ್ದು, ಮೊದಲಿಗೆ ಬಿರುದಾವಳಿಗಳು, ಜಾನಪದ ತಂಡಗಳು, ನಂತರ ಕಾಲ್ನಡಿಗೆಯಲ್ಲಿ ಚಲಿಸುವ ವಿವಿಧ ತಂಡಗಳ ಬಳಿಕ ಪರ್ಯಾಯ ಪೀಠವನ್ನೇರುವ ಸ್ವಾಮೀಜಿಯವರು ಮೇನೆಯಲ್ಲಿ ಬರಲಿದ್ದು ನಂತರ ಅಷ್ಠ ಮಠಗಳ ಎಲ್ಲಾ ಸ್ವಾಮೀಗಳು ಶಿಷ್ಠಾಚಾರದ ಸರದಿಯ ಪ್ರಕಾರ ಮೇನೆಯಲ್ಲಿ ಮುಂದುವರಿಯಲಿದ್ದು ಆ ನಂತರ ಟ್ಯಾಬ್ಲೋಗಳು ಇತರ ಪ್ರದರ್ಶನ ವಾಹನಗಳು ಬರಲಿದೆ ಎಂದರು.
ಪರ್ಯಾಯ ಮಹೋತ್ಸವ ವೀಕ್ಷಿಸಲು ಬರುವ ವೀಕ್ಷಕರಿಗೆ ಶ್ರೀ ಕೃಷ್ಣ ಸೇವಾ ಬಳಗದಿಂದ ಹೊರ ಪರಿಕಲ್ಪನೆಯ ಪರಿಸರ ಸ್ನೇಹಿ ಪ್ಲಾಸ್ಟಿಕ್ ಮುಕ್ತ ದರ್ಬಾರ್ ಪಾಸುಗಳನ್ನು ನೀಡಲಾಗುತ್ತಿದ್ದು ಅದನ್ನು ಉಪಯೋಗಿಸಿದ ಬಳಿಕ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ನೀರಿಗೆ ಹಾಕಲು ಸೂಚಿಸಲಾಗಿದೆ. ಅದರಲ್ಲಿ ತುಳಸಿ ಬೀಜಗಳನ್ನು ಅಳವಡಿಸಲಾಗಿದ್ದು, ಗಿಡಗಳು ಚಿಗುರಲಿವೆ.
ಇತರ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರಿನ ನಿರಂತರ ಸರಬರಾಜಿನ ವ್ಯವಸ್ಥೆ, ಪ್ರವಾಸಿಗಳಿಗೆ ಮತ್ತು ಕಲಾವಿದರಿಗೆ ವಸತಿಗ ವ್ಯವಸ್ಥೆಗಳು ಕೂಡ ಸಮರ್ಪಕ ರೀತಿಯಲ್ಲಿ ಪೂರ್ಣಗೊಂಡಿದೆ. ಜಿಲ್ಲೆಯ ವಿವಿಧ ಭಾಗಗಳ ಸಂಘಟನೆಗಳ ಮುಖಾಂತರ ಸುಮಾರು ಒಂದು ಸಾವಿರದ ಇನ್ನೂರಕ್ಕೂ ಹೆಚ್ಚು ಸ್ವಯಂ ಸೇವಕರು ರಾತ್ರಿ ಹಗಲು ಕೆಲಸ ಮಾಡಲು ಸರ್ವಸನ್ನದ್ದರಾಗಿದ್ದಾರೆ. ಪ್ರತಿ ದಿನ ವೈಯುಕ್ತಿಕವಾಗಿ ಅದಮಾರು ಮಠಕ್ಕೆ ಬಂದು ಸೇವೆ ಸಲ್ಲಿಸಲು ಹಲವಾರು ಸ್ವಯಂ ಸೇವಕರು ಆಶಯ ವ್ಯಕ್ತ ಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಅವಕಾಶಗಳನ್ನು ನೀಡಲಾಗುತ್ತಿದೆ. ಉಡುಪಿಯ ಸೇರಿಗಾರ ಕುಟುಂಬಸ್ಥರು ಪ್ರಸಾದ ತಯಾರಿಕೆ ಮತ್ತು ವಿತರಣೆಗಾಗಿ ರಾಜಾಂಗಣದ ಕಾರು ಪಾರ್ಕಿಂಗ್ ಸಮೀಪ ಸುಮಾರು ಒಂದುವರೆ ಎಕರೆ ಸ್ಥಳದಲ್ಲಿ ಅವಕಾಶವನ್ನು ಕಲ್ಪಿಸಿದ್ದಾರೆ
ಜನವರಿ 17ರ ರಾತ್ರಿ ಸುಮಾರು 35ರಿಂದ 40 ಸಾವಿರ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರೆ 18ರಂದು ಸುಮಾರು 40ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕಾರ ಮಾಡಲಿದ್ದಾರೆ. ಅಡಿಗೆ ವ್ಯವಸ್ಥೆಯನ್ನು ಕೃಷ್ಣ ಮಠದ ಅಡುಗೆ ಛತ್ರದಲ್ಲಿ ಮತ್ತು ಕಾರು ಪಾರ್ಕಿಂಗ್ ಸಮೀಪ ಮಾಡಲಾಗಿದೆ. ಅನ್ನಪ್ರಸಾದ ವಿತರಣೆಯು ಸ್ವಯಂ ಸೇವಾ ಪದ್ಧತಿ ಮತ್ತು ಕುಳಿತು ಸೇವಿಸುವ ಪದ್ಥತಿ ಹೀಗೆ ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದ್ದು ಸ್ವಯಂ ಸೇವಾ ಪದ್ಥತಿಯ ಛತ್ರಕ್ಕೆ ಅನ್ನ ಕೃಷ್ಣ ಎಂದು ಹಾಗೂ ಕುಳಿತು ಪ್ರಸಾದ ಸೇವನೆ ಮಾಡುವ ಛತ್ರಕ್ಕೆ ಅನ್ನ ಪ್ರಜ್ಞಾ ಎಂದು ಹೆಸರಿಸಲಾಗಿದೆ.
ಜನವರಿ 17ರಂದು ಸಾಯಂಕಾಲ 7 ಗಂಟೆಗೆ ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿಗಳನ್ನು ಶ್ರೀ ಕೃಷ್ಣ ಸೇವಾಬಳಗದ ವತಿಯಿಂದ ಗೌರವಾರ್ಪಣೆ ಅರ್ಪಿಸುವ ಸಮಾರಂಭ ಆಯೋಜಿಸಲಾಗಿದೆ ಎಂದರು.
ಜನವರಿ 18ರಂದು ಅದಮಾರು ಮಠದ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ಪರ್ಯಾಯ ಪೀಠಾರೋಹಣಗೈಯಲಿದ್ದಾರೆ. ಉಡುಪಿ ಶ್ರೀ ಕೃಷ್ಣನ ಪೂಜೆಗಾಗಿ ಮಾಡಿಕೊಂಡ ಶತಮಾನಗಳ ಇತಿಹಾಸವಿರುವ ಅಪೂರ್ವ ವ್ಯವಸ್ಥೆಯ ಅಧಿಕಾರ ಹಸ್ತಾಂತರ ಪ್ರಕ್ರಿಯೆಯೇ ಪರ್ಯಾಯ. ಮಧ್ವಾಚಾರ‌್ಯರ ಕಾಲದಲ್ಲಿ ಅಷ್ಟ ಮಠಗಳ ನಡುವೆ ಎರಡು ತಿಂಗಳಿಗೊಮ್ಮೆ ಪೂಜಾಧಿಕಾರ ಹಸ್ತಾಂತರವಾಗುತ್ತಿದ್ದರೆ ಶ್ರೀ ವಾದಿರಾಜ ತೀರ್ಥರು ಅದನ್ನು ಎರಡು ವರ್ಷಕ್ಕೆ ವಿಸ್ತರಿಸಿದರು. ಜ. 18ರ ಮುಂಜಾನೆ ಪೂಜೆಯ ಅಧಿಕಾರವನ್ನು ಅಕ್ಷಯ ಪಾತ್ರೆ, ಸಟ್ಟುಗ, ಗರ್ಭಗುಡಿಯ ಕೀಲಿ ಕೈ ನೀಡಿ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಹಸ್ತಾಂತರಿಸಲಾಗುತ್ತದೆ.
ಶ್ರೀಕೃಷ್ಣನ ಎರಡು ವರ್ಷದ ಪೂಜಾಧಿಕಾರ ಪರ್ಯಾಯ ಪಲಿಮಾರು ಮಠದ ಕೈಯಲ್ಲಿದೆ. ಜನವರಿ 18ಕ್ಕೆ ಅಧಿಕಾರ ಅದಮಾರು ಮಠದ ಪಾಲಾಗಲಿದೆ. ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮುಂದಿನ ಎರಡು ವರ್ಷದ ಕೃಷ್ಣನ ಪೂಜಾಧಿಕಾರವನ್ನು ತನ್ನ ಶಿಷ್ಯನಿಗೆ ಬಿಟ್ಟುಕೊಟ್ಟಿದ್ದಾರೆ. ಈ ಹಿಂದೆ ಎರಡು ಬಾರಿ ಪರ್ಯಾಯ ಪೂರೈಸಿರುವ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಅಧಿಕಾರವನ್ನು ಶಿಷ್ಯನಿಗೆ ಬಿಟ್ಟುಕೊಟ್ಟಿದ್ದಾರೆ. ಜನವರಿ 17 ಕ್ಕೆ ಪಲಿಮಾರು ಮಠದ ಪೂಜಾಧಿಕಾರ ಮುಕ್ತಾಯವಾಗಲಿದ್ದು, 18 ರ ಬೆಳಗ್ಗೆ ಮಠದ ಗರ್ಭಗುಡಿಯಲ್ಲಿ ಅಧಿಕಾರ ಹಸ್ತಾಂತರ ಆಗಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ 8 ಮಠದ ನಡುವೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆ. ಹಿರಿಯ ಶ್ರೀಗಳ ಆಜ್ಞೆಯಂತೆ ಪರ್ಯಾಯ ನಡೆಸಲು ಒಪ್ಪಿರುವ ಈಶಪ್ರೀಯತೀರ್ಥರು. ಸಂಪ್ರಾದಯಕ್ಕೆ ತೊಡಕಾಗದಂತೆ ಬಡಗು ಮಾಳಿಗೆಯಲ್ಲಿ ಅರಳುಗದ್ದಿಗೆ ಸಹಿತ ಒಳಗಿನ ಕಾರ್ಯಗಳು ನಡೆಯಲಿದೆ. ಒಳಗಿನ ಪೂಜೆಗಳ ಬಳಿಕ ದರ್ಬಾರು ನಡೆಯಲಿದೆ
ಪರ್ಯಾಯ ಪೀಠಾರೋಹಣಕ್ಕೆ ಮುನ್ನ ಶ್ರೀಗಳು ಪವಿತ್ರ ಕ್ಷೇತ್ರಗಳನ್ನು, ರಾಜ್ಯದ, ಕರಾವಳಿಯ ಪ್ರಮುಖ ಸಾನ್ನಿಧ್ಯಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ. ಜನವರಿ ಮೊದಲ ವಾರ ಪುರಪ್ರವೇಶ ಮಾಡುವ ಸ್ವಾಮೀ ಜಿಗಳನ್ನು ಇಡೀ ಸಮಾಜ ಜಾತಿ-ಮತ ಭೇದವಿಲ್ಲದೆ ಪೌರ ಸನ್ಮಾನದ ಮೂಲಕ ಎದುರುಗೊಳ್ಳುವುದು ವಿಶೇಷ. ಉಡುಪಿ ನಗರವೆಲ್ಲ ಬೃಹತ್ ಗಾತ್ರದ ಸ್ವಾಗತ ಕಮಾನು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಪರ್ಯಾಯ ಮಹೋತ್ಸವಕ್ಕೆ ತಯಾರಾಗಿ ನಿಂತಿವೆ. ಪರ್ಯಾಯ ಪೀಠಾ ರೋಹಣದ ಮುನ್ನಾ ದಿನ ರಾತ್ರಿ (ಈ ಬಾರಿ ಜ.17) ಪೀಠವೇರಲಿರುವ ಸ್ವಾಮೀಜಿಗಳು ಕಾಪು ವಿನ ದಂಡ ತೀರ್ಥದಲ್ಲಿ ಮಿಂದು ಶುಚೀರ್ಭೂತ ರಾಗಿ ರಾತ್ರಿ ಉಡುಪಿ ಯ ಜೋಡುಕಟ್ಟೆಯಲ್ಲಿ ತಮಗಾಗಿ ಕಾದಿರುವ ಇತರ ಸಪ್ತ ಮಠಾಧೀಶರ ಜತೆಗೂಡಿ ಪಲ್ಲಕ್ಕಿಯಲ್ಲಿ ಶ್ರೀ ಕಷ್ಣನ ಆಲಯ ದೆಡೆಗೆ ಸಾಗುವುದೇ ಪರ್ಯಾಯ ಮೆರವಣಿಗೆ.
ಜ. 18 ರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠದಲ್ಲಿ ಭಾವೀ ಪರ್ಯಾಯ ಪೀಠಾಧೀಶರನ್ನು ಕೂರಿಸಿ, ಶ್ರೀಕಷ್ಣ ಗರ್ಭಗುಡಿಯ ಕೀಲಿ ಕೈ, ಅನ್ನದಾನದ ನಿಟ್ಟಿನಲ್ಲಿ ಅಕ್ಷಯ ಪಾತ್ರೆ ಮತ್ತು ಸಟ್ಟುಗವನ್ನು ಹಸ್ತಾಂತರಿಸಲಾಗುತ್ತದೆ, ಅರಳು ಗದ್ದಿಗೆಯಲ್ಲಿ ಕೂರಿಸಲಾಗುತ್ತದೆ.
ಪರ್ಯಾಯ ಉತ್ಸವದ ಪ್ರಮುಖ ವಿಧಿವಿಧಾನ ಗಳಾದ ಬಾಳೆಮುಹೂರ್ತ, ಕಟ್ಟಿಗೆ ಮುಹೂರ್ತ, ಪುರಪ್ರವೇಶ ಮೊದಲಾದವುಗಳ ಅನಂತರ ಅತ್ಯಂತ ಮುಖ್ಯ ಕಾರ್ಯಕ್ರಮಗಳು ಆರಂಭಗೊಳ್ಳುವುದು ಕಾಪು ದಂಡತೀರ್ಥದಲ್ಲಿ ಪವಿತ್ರಸ್ನಾನದ ಅನಂತರ. ಜ. 18ರಂದು ಬೆಳಗಿನ ಜಾವ ಕಾಪು ದಂಡತೀರ್ಥ ದಲ್ಲಿ ಪವಿತ್ರ ಸ್ನಾನ ಮಾಡುವ ಭಾವೀ ಅದಮಾರು ಪರ್ಯಾಯ ಶ್ರೀಗಳು 1.50 ಗಂಟೆಯ ವೇಳೆಗೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿ 4.50ರ ವೇಳೆಗೆ ಕನಕನಕಿಂಡಿಯಲ್ಲಿ ಕೃಷ್ಣದರ್ಶನ, ಅನಂತೇಶ್ವರ ಚಂದ್ರಮೌಳೇಶ್ವರ ದೇವರ ದರ್ಶನ ಮಾಡು ತ್ತಾರೆ. ಅನಂತರ ಶ್ರೀಕೃಷ್ಣ ಮಠ ಪ್ರವೇಶಿಸಿ ಅಕ್ಷಯಪಾತ್ರೆ ಸ್ವೀಕರಿಸಿ ಪವಿತ್ರ ಸರ್ವಜ್ಞ ಪೀಠಾರೋಹಣ ಗೈಯು ತ್ತಾರೆ. ಅಲ್ಲಿಂದ ಬಳಿಕ ನಡೆಯು ವುದು ಅಷ್ಟ ಮಠಾಧೀಶರು ಒಂದೇ ವೇದಿಕೆಯಲ್ಲಿ ಕುಳಿತು ನಡೆಸುವ ಸಮ್ಮೋಹಕ ದರ್ಬಾರ್ ನಡೆಯುವುದು ವಾಡಿಕೆಯಾಗಿದ್ದು ಈ ಬಾರಿಯ ದರ್ಬಾರ್ ಮಧ್ಯಾಹ್ನ ನಡೆಯಲಿದೆ. ಇಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಅಷ್ಟಮಠಾಧೀಶರಿಂದ ಸಂದೇಶ, ಗಣ್ಯರ ಶುಭ ಸೇಸೆಗಳಿಂದ ಸಮ್ಮಿಳಿ ತವಾಗಿ ಹೊಸ ಪರ್ವಕ್ಕೆ ನಾಂದಿಯಾಗುತ್ತದೆ. ಪರ್ಯಾಯದ ದಿನ ಮಹಾ ಅನ್ನ ಸಂತರ್ಪಣೆ, ರಾತ್ರಿ ಬ್ರಹ್ಮೋತ್ಸವ ವೈಭವ ನಡೆಯುತ್ತದೆ.
ಈ ಬಾರಿಯ ಅದಮಾರು ಪರ್ಯಾಯ ಹತ್ತು ಹಲವು ವಿಶೇಶತೆಗಳನ್ನು ಹೊಂದಲಿದೆ. ಪರಿಸರದ ವಿಷಯದಲ್ಲಿ ವಿಶೇಷ ಅಸಕ್ತಿ ಹೊಂದಿರುವ ಅದಮಾರು ಶ್ರೀಗಳು ಈ ಬಾರಿಯ ಪರ್ಯಾಯದಲ್ಲಿ ಪರಿಸರ ಪ್ರೇಮಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪರ್ಯಾಯ ಮಹೋತ್ಸವದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಲಿದೆ. ಪರ್ಯಾಯ ಮಹೋತ್ಸವಕ್ಕೆ ಶುಭಕೋರಲು ಕೂಡ ಬಟ್ಟೆ ಬ್ಯಾನರನ್ನು ಬಳಸಲಾಗಿದೆ. ಅಷ್ಟೇ ಅಲ್ಲದೇ ನಗರದಲ್ಲಿ ಹಾಕಲಾಗಿರುವ ಬೃಹತ್ ಅಕರ್ಷಕ ಕಟೌಟ್ ಗಳು, ಸ್ವಾಗತ ಕಮಾನುಗಳು ಕೂಡ ಬಟ್ಟೆಯಿಂದಲೇ ನಿರ್ಮಾಣವಾಗಿದೆ. ಈ ಮೂಲಕ ಪರಿಸ್ನೇಹಿ ಪರ್ಯಾಯಕ್ಕೆ ಅದಮಾರು ಶ್ರೀ ಗಳು ಮುನ್ನುಡಿ ಬರೆದಿದ್ದಾರೆ.