ಅನಾರೋಗ್ಯಪೀಡಿತ ವ್ಯಕ್ತಿಗೆ ಬಿರುವೆರ್ ಕುಡ್ಲ ಆರ್ಥಿಕ ಸಹಾಯ
ಮಂಗಳೂರು: ಒಂದೆಡೆ ತಾಳಿಭಾಗ್ಯ ನೀಡಿದ ಗಂಡ ಆಸ್ಪತ್ರೆಯ ಐಸಿಯುನಲ್ಲಿ ಮಲಗಿದ ಕರುಣಾಜನಕ ಕಥೆಯಾದರೆ ಇನ್ನೊಂದೆಡೆ ಹನ್ನೆರಡರ ಹರೆಯದ ಮಗಳು ರಕ್ತವಿಲ್ಲದೆ ತಲಸ್ಸೆಮಿಯಾ ಖಾಯಿಲೆಯ ಬಳಲುತ್ತಿರುವುದು ಈ ಹೆಣ್ಣು ಮಗಳ ಜೀವನವನ್ನು ದುಸ್ತರವನ್ನಾಗಿ ಮಾಡಿದೆ.
ಹೌದು ರೇಣುಕಾ ಇದೀಗ ಅಡ ಕತ್ತರಿಯಲ್ಲಿ ಸಿಕ್ಕಂತೆ ನರಳುತ್ತಿದ್ದಾರೆ. ಕಳೆದ 45 ದಿನಗಳಿಂದ ಗಂಡ ಸುನಿಲ್ ದೇರಳಕಟ್ಟೆಯ ಯನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಪರಿಸ್ಥಿತಿ ಗಂಭೀರವಾಗಿದೆ. ಇವರ ಚಿಕಿತ್ಸೆಗೆ ಲಕ್ಷಾಂತರ ವ್ಯಯವಾಗುತ್ತಿದ್ದು ಇದನ್ನು ತಿಳಿದ ಉದಯ ಪೂಜಾರಿ ನೇತೃತ್ವದ ಫ್ರೆಂಡ್ಸ್ ಬಳ್ಳಾಲ್ ಬಾಗ್ -ಬಿರುವೆರ್ ಕುಡ್ಲ ನೆರವಿಗೆ ಧಾವಿಸಿದೆ. ಗುರುವಾರ ಆಸ್ಪತ್ರೆಗೆ ತೆರಳಿ ತತ್ಕ್ಷಣದ ಚಿಕಿತ್ಸೆಗೆ 50 ಸಾ.ರೂ ನಗದು ನೀಡಿ ಧೈರ್ಯ ತುಂಬಿದೆ. ನಗರದಲ್ಲಿ ಎಳೆ ನೀರು ಮಾರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇದೀಗ ಏಕೈಕ ಆಧಾರ ಸ್ಥಂಬವೂ ಇಲ್ಲವಾಗಿದೆ. ಇನ್ನೊಂದೆಡೆ ಪುಟ್ಟ ಮಗಳು ಶ್ರಾವ್ಯ ತಸ್ಸೇಮಿಯಾ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಖಾಯಿಲೆಯು ದೇಹದಲ್ಲಿ ರಕ್ತ ಉತ್ಪಾದಸುವುದನ್ನು ತಡೆದು ದೇಹವನ್ನು ಒಣಗಿಸುತ್ತದೆ. ಪ್ರತೀ 15 ದಿನಕ್ಕೊಮ್ಮೆ ರಕ್ತವನ್ನು ದೇಹಕ್ಕೆ ಸೇರಿಸ ಬೇಕಾಗುತ್ತದೆ. ಈ ಕೌಟುಂಬಿಕ ಸಮಸ್ಯೆಯಿಂದ ರೇಣುಕ ತತ್ತರಿಸಿ ಹೋಗಿದ್ದಾರೆ. ದೇವರಿಗೆ ದೀಪ ಉರಿಸುವ ಬತ್ತಿ ಮಾಡುವ ಸ್ವ ಉದ್ಯೋಗ ಮಾಡುತ್ತಿರುವ ರೇಣುಕಾಗೆ ಆದಾಯವೂ ಹೇಳಿಕೊಳ್ಳುವಷ್ಟಿಲ್ಲ. ದಾನಿಗಳು ಈ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದಲ್ಲಿ ಒಂದಿಷ್ಟು ಚಿಕಿತ್ಸಾ ವೆಚ್ಚ ಭರಿಸಲು ನೆರವಾದಿತು ಮಾತ್ರವಲ್ಲ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಮಾದರಿ ಹೆಜ್ಜೆ ಇಟ್ಟು ನೆರವಿನ ಹಸ್ತ ಚಾಚಿ, ಇತರರೂ ನೆರವು ಒದಗಿಸುವಂತೆ ಮನವಿ ಮಾಡಿದೆ.
ಈ ನೆರವು ವಿತರಣಾ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್,ಗೋವಿಂದ ಶೆಟ್ಟಿ ಎಕ್ಕೂರು,ಗೌತಮ್ ಶೆಟ್ಟಿ ಕಾವೂರು,ರೂಪಕ್ ಶೆಟ್ಟಿ ಕೊಟ್ಟಾರ,ಪ್ರಾಣೇಶ್ ಬಂಗೇರ, ಮುಂಬೈ ಉದ್ಯಮಿ ಮಹೆಶ್ ಶೆಟ್ಟಿ, ರಾಮ್ ಪ್ರಸಾದ್ ಎಕ್ಕೂರು,ಯತೀಶ್ ಬಿರ್ವ ಬಳ್ಳಾಲ್ ಬಾಗ್,ರೋಹಿದಾಸ್ ಕರ್ಕೇರ ಕದ್ರಿ, ದಿನಿಲ್ ಬಳ್ಳಾಲ್ಬಾಗ್ ಉಪಸ್ಥಿತರಿದ್ದರು.