ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನಾಲ್ಕನೇ ಬಾರಿ ವೇಷ ಹಾಕಿದ ರವಿ ಕಟಪಾಡಿ
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಫ್ರೆಂಡ್ಸ್ ಕಟಪಾಡಿ ಸಹಕಾರದೊಂದಿಗೆ ಸೆ.13 ಮತ್ತು 14 ರಂದು ವಿಭಿನ್ನ ಶೈಲಿಯ ವೇಷ ಹಾಕಿ ಅದರಿಂದ ಬಂದ ಲಕ್ಷಾಂತರ ರೂಪಾಯಿ ಹಣವನ್ನು ಅನಾರೋಗ್ಯ ಪೀಡಿತರಿಗೆ ದೇಣಿಗೆ ನೀಡಿ ಹೆಸರುವಾಸಿಯಾಗಿರುವ ಕಟಪಾಡಿ ಜೆ.ಎನ್.ನಗರ ಕಾಲೊನಿಯ ಯುವಕ ಸೆಂಟ್ರಿಂಗ್ ರವಿ ಈ ಬಾರಿ ಕ್ರಾಂಪಸ್ ವೇಷ ಹಾಕಿ ಬೀದಿಗಿಳಿದು ದೇಣಿಗೆ ಸಂಗ್ರಹಕ್ಕೆ ಹೊರಟಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸುಮಾರು ರೂ 9 ಲಕ್ಷ ಸಾಮಾಜಿಕ ಸೇವೆಗೆ ನೆರವು ನೀಡಿ ಗಮನ ಸೆಳೆದಿ ರುವ ರವಿ ಮತ್ತು ಅವರ ಗೆಳೆಯರು, ಈ ಬಾರಿ ನಾಲ್ವರು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ವೇಷ ಹಾಕಿಯೇ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.
ಈ ಬಾರಿ ಅನಾರೋಗ್ಯದಿಂದ ಬಳಲುತ್ತಿರುವ 4 ಬಡ ಮಕ್ಕಳಾದ ಮೂಡಬಿದರೆಯ ಧರೆಗುಡ್ಡೆ – ಪಣಪಿಲ ಪುನಿಕೆಬೆಟ್ಟುವಿನ ಒಂದುವರೆ ವರ್ಷದ ಲಾವಣ್ಯ, ಶಿವಮೊಗ್ಗದ ಶಾಹೀನಾ ಅವರ ಪುತ್ರಿ ಮೆಹಕ್, ಉಡುಪಿ ದೆಂದೂರುಕಟ್ಟೆಯ ಸುನೀತಾ ಪ್ರಕಾಶ ಅವರ ಒಂದುವರೆ ತಿಂಗಳಿನ ಮಗು ಹಾಗೂ ಬನ್ನಂಜೆಯ ಎಳೆಯ ಮಗುವಿಗೆ ಈ ಬಾರಿ ಸಹಾಯ ಹಸ್ತ ನೀಡಲು ರವಿ ಮುಂದಾಗಿದ್ದಾರೆ.
2014ರಲ್ಲಿ ಫ್ರಾನ್ಸ್ ಲೆಬ್ರೆಂತ್ ವೇಷ ಹಾಕಿ ರೂ. 1.04 ಲಕ್ಷ ಸಂಗ್ರಹಿಸಿ ಎಳ್ಳಂಪಳ್ಳಿಯ ಮೂಕಾಂಬಿಕ ಅವರ ಮಗಳು ಅನ್ವಿತಾಳ ಶಸ್ತ್ರ ಚಿಕಿತ್ಸೆಗೆ ನೀಡಿ ಗಮನಸೆಳೆದರು. ಈ ಸೇವೆಯಿಂದ ಪ್ರೇರಿತರಾಗಿ 2015ರಲ್ಲಿ ಮತ್ತೆ ಆಕರ್ಷಕ ಲಿಜಾರ್ಡ್ ಮ್ಯಾನ್ ವೇಷಧರಿಸಿ ₹ 3.20ಲಕ್ಷ ಸಂಗ್ರಹಿಸಿ ವಿವಿಧೆಡೆಯ 4 ಮಕ್ಕಳ ಆರೋಗ್ಯ ನೆರವಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ಕೆ.ಅಣ್ಣಾಮಲೈ ಅವರ ಮೂಲಕ ವಿತರಿಸಿದರು. ಇವರಿಂದ ಪ್ರೇರಿತರಾಗಿ ಎಸ್ಪಿ ಕೆ.ಅಣ್ಣಾಮಲೈ ಅವರು ಕೂಡಾ ರೂ 10 ಸಾವಿರ ದೇಣಿಗೆ ಮಕ್ಕಳಿಗೆ ನೀಡಿದ್ದರು. ಈ ಜನಸೇವೆಯನ್ನು ಮುಂದುವರಿಸುತ್ತಾ 2016 ರಲ್ಲಿ ಕೂಡಾ 4 ಮಕ್ಕಳ ಆರೋಗ್ಯ ನೆರವಿಗೆ ಮಮ್ಮಿ ರಿಟರ್ನ್ ಸಿನೆಮಾದ ಮಮ್ಮಿ ವೇಷ ವೇಷಹಾಕಿ ದೇಣಿಗೆ ಸಂಗ್ರಹಿಸಿ ಅಂದಿನ ಜಿಲ್ಲಾ ಪಂಚಾಯತ್ ಸಿಇಒ ಪ್ರಸ್ತುತ ಜಿಲ್ಲಾಧಿಕಾರಿಗಳಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಂದ ವಿತರಿಸಿದ್ದರು. ಪುನಃ ಈ ವರ್ಷ ಕ್ರಾಂಪಸ್ ವೇಷದಲ್ಲಿ ಮತ್ತೆ ನಾಲ್ಕು ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ರವಿ ಮತ್ತವರ ಫ್ರೆಂಡ್ಸ್ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ.
ವೇಷ ಹಾಕಿ ಸಂಗ್ರಹವಾದ ಹಣವನ್ನು ಸಮನಾಗಿ ಹಂಚಿ ನಾಲ್ವರು ಮಕ್ಕಳ ಚಿಕಿತ್ಸೆಗೆ ನೀಡಲಿದ್ದು ಸೆ. 19 ರಂದು ಸಾಯಂಕಾಲ 4 ಗಂಟೆಗೆ ಕಟಪಾಡಿಯಲ್ಲಿ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಗುತ್ತದೆ.