ಅನಾರೋಗ್ಯ ಪೀಡಿತ ಮಕ್ಕಳ ನೆರವಿಗೆ ಅಷ್ಟಮಿಗೆ ‘ವಾಂಪೈರ್’ ವೇಷದೊಂದಿಗೆ ಬರಲಿದ್ದಾರೆ ರವಿ ಕಟಪಾಡಿ
ಉಡುಪಿ: ಪ್ರತಿವರ್ಷದಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿಯ ದಿನ ವಿಭಿನ್ನ ವೇಷ ಹಾಕಿ ನಿಧಿ ಸಂಗ್ರಹಿಸಿ, ಬಡ ಆರ್ಥಿಕ ನೆರವು ನೀಡಲಾಗುವುದು ಎಂದು ಕಲಾವಿದ ರವಿ ಕಟಪಾಡಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷಗಳಿಂದ ವಿಭಿ ವೇಷ ಹಾಕುತ್ತಾ ಜನರಿಂದ ದೇಣಿಗೆ ಸಂಗ್ರಹಿಸಿ ಬಡ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಇದುವರೆಗೂ ₹ 35 ಲಕ್ಷಕ್ಕೂ ಹೆಚ್ಚಿನ ನೆರವು ನೀಡಲಾಗಿದೆ ಎಂದರು.
ಮೊದಲ ವರ್ಷ ಸಂಗ್ರಹವಾದ ₹ 1.04 ಲಕ್ಷದಲ್ಲಿ ಎಳ್ಳಂಪಳ್ಳಿ ದಿಪಾನ್ ಗುಡ್ಡೆಯ ಮುಕಾಂಬಿಕಾ ಅವರ ಪುತ್ರಿ ಅನ್ವಿತಾಳ ಶಸ್ತ್ರಚಿಕಿತ್ಸೆಗೆ ನೀಡಲಾಯಿತು. 2ನೇ ವರ್ಷದ ₹3.20 ಲಕ್ಷವನ್ನು ನಾಲ್ಕು ಮಕ್ಕಳಿಗೆ, 3ನೇ ವರ್ಷದ ₹4.65 ಲಕ್ಷವನ್ನು ಮೂರು ಮಕ್ಕಳಿಗೆ, 4ನೇ ವರ್ಷ ಸಂಗ್ರಹವಾದ 5.12 ಲಕ್ಷವನ್ನು ಮೂವರು ಮಕ್ಕಳಿಗೆ ಹಾಗೂ 5ನೇ ವರ್ಷ ಸಂಗ್ರಹವಾದ ₹5.32 ಲಕ್ಷವನ್ನು ಹಾಗೂ ಮಿಲಾಪ್ ಸಂಸ್ಥೆ ನೀಡಿದ ₹16 ಲಕ್ಷವನ್ನು 7 ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ಸಂಗ್ರಹವಾದ ಹಣವನ್ನು ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮೂಡುಬಾರಳಿಯ ಮಂದರ್ತಿಯ ಕುಶಲ ಹಾಗೂ ಉಷಾ ದಂಪತಿ ಪುತ್ರ ಶ್ರೀತನ್ ಚಿಕಿತ್ಸೆಗೆ, ಬಿಳಿ ರಕ್ತಕಣ ಸಮಸ್ಯೆ ಇರುವ ಕಳ್ಳಿಗುಡ್ಡೆ ವಕ್ವಾಡಿಯ ರವೀಂದ್ರ ಯಶೋಧ ದಂಪತಿ ಪುತ್ರ ಪ್ರಥಮ್ಗೆ, ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿರುವ ಪಂಚಬೆಟ್ಟು ಹಿರಿಯಡಕ ಕೃಷ್ಣಮೂರ್ತಿ ಆಚಾರ್ಯ, ಕುಶಲ ದಂಪತಿ ಪುತ್ರ ಕಿರಣ್ ಸೇರಿದಂತೆ 5 ಮಕ್ಕಳ ಚಿಕಿತ್ಸೆಗೆ ನೀಡಲಾಗುವುದು ಎಂದರು.
ದೇಣಿಗೆಯನ್ನು ಸೆ.3ರಂದು ಸಂಜೆ 5ಕ್ಕೆ ಕಟಪಾಡಿ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ಫಲಾನುಭವಿಗಳಿಗೆ ಕೊಡಲಾಗುವುದು. ಅಂದು ಕೇಮಾರು ಮಠದ ಈಶವಿಠಲದಾಸ ಸ್ವಾಮೀಜಿ, ಎಸ್ಪಿ ನಿಶಾ ಜೇಮ್ಸ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ವಿದೇಶದಲ್ಲಿರುವ ಕೆಲವರು ಈಗಾಗಲೇ ರವಿ ಕಟಪಾಡಿ ಅವರ ಖಾತೆಗೆ ₹ 1 ಲಕ್ಷ ಜಮೆ ಮಾಡಿದ್ದಾರೆ. ಈ ಬಾರಿ ನಿರೀಕ್ಷೆಗೂ ಮೀರಿ ಸಾರ್ವಜನಿಕರು ಸ್ಪಂದಿಸಬೇಕು. ವಿಜಯಾ ಬ್ಯಾಂಕ್ ಖಾತೆ ಸಂಖ್ಯೆ 117201011001056, ಐಎಫ್ ಎಸ್ಸಿ ಕೋಡ್ ವಿಐಜೆಬಿ 0001172 ನೆರವು ನೀಡಬಹುದು ಎಂದರು.