ಅನಾವಶ್ಯಕವಾಗಿ ರಸ್ತೆಗಿಳಿಯುವವರ ವಿರುದ್ಧ ದಿಢೀರ್ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ, ಎಸ್ಪಿ
ಉಡುಪಿ: ಕರೋನಾ ವೈರಸ್ ಹಿನ್ನೆಲೆಯಲ್ಲಿ ಉಡುಪಿನಗರದಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ, ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಶುಕ್ರವಾರ ಬಿಸಿ ಮುಟ್ಟಿಸಿದರು.
ನಗರದ ಕಲ್ಸಂಕ ಸರ್ಕಲ್ ನಲ್ಲಿ ದಿಢೀರ್ ತಪಾಸಣೆ ಆರಂಭಿಸಿದ ಜಿಲ್ಲಾಧಿಕಾರಿ ಜಿ ಜಗದೀಶ್ ಹಾಗೂ ಎಸ್ಪಿ ವಿಷ್ಣುವರ್ಧನ್ ಅವರು, ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಮನೆ ಬಿಟ್ಟು ಹೊರಗೆ ಬಂದಿರುವುದರ ಉದ್ದೇಶ ಪ್ರಶ್ನಿಸಿದರು. ಆಸ್ಪತ್ರೆ, ಮೆಡಿಕಲ್, ಕೃಷಿ ಚಟುವಟಿಕೆ, ಸ್ಥಳೀಯವಾಗಿ ಸಾಮಾನು ಖರೀದಿಯಂತಹ ಅತ್ಯವಶ್ಯಕ ಕೆಲಸಗಳಿಗೆ ಬಂದಿರುವವರಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಯಿತು. ಹಾಲಿನ ವಾಹನಗಳು, ಗೂಡ್ಸ್ ವಾಹನಗಳಿಗೆ ಸಂಚರಿಸಲು ಬಿಡಲಾಯಿತು. ಅನಾವಶ್ಯಕವಾಗಿ ಹೊರಗೆ ಬಂದಂತವರ ವಾಹನಗಳನ್ನು ಜಪ್ತಿ ಮಾಡಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕರೊನಾ ಹೋಗಿದೆ ಎಂಬುದಾಗಿ ಕೆಲವರು ಸ್ವಯಂ ನಿರ್ಧಾರ ಕೈಗೊಂಡು ಬೇಕಾಬಿಟ್ಟಿ ತಿರುಗುತ್ತಿದ್ದಾರೆ. ಅಂಥವರ ವಾಹನ ಜಪ್ತಿ ಮಾಡುತ್ತೇವೆ. ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಬಿಡುಗಡೆಯಾಗಿದ್ದು, ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ 2ನೇ ಮಾದರಿ ನೆಗೆಟಿವ್ ಬಂದಿದೆ. ಇನ್ನೊಂದು ವರದಿ ನೆಗೆಟಿವ್ ಬಂದರೆ ಕೂಡಲೇ ಡಿಸ್ಚಾರ್ಜ್ ಮಾಡುತ್ತೇವೆ. ಭಟ್ಕಳದಿಂದ ಹೆಚ್ಚಿನ ಚಿಕಿತ್ಸೆಗೆ ಇಲ್ಲಿಗೆ ಆಗಮಿಸಿದ ಗರ್ಭಿಣೆ ಮಹಿಳೆ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಈಕೆಯ ಗಂಟಲು ದ್ರವ ಮಾದರಿ ಗುರುವಾರ ಕಳುಹಿಸಲಾಗಿದೆ. ಇನ್ನೊಂದು ವರದಿ ನೋಡಿ 2-3 ದಿನದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.
ಕರೊನಾ ಸ್ಥಿತಿಗತಿ ನಿರ್ಧಾರ ಮಾಡುವ ಅಧಿಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಹೀಗಾಗಿ ಜನರಲ್ಲಿ ಸ್ವಯಂ ಘೋಷಣೆ ಮನೋಭಾವ ಸಲ್ಲದು. ಜಿಲ್ಲೆ ಆರೆಂಟ್ ಕೆಟಗರಿಯಲ್ಲಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೇಸ್ಗಳು ಬರುತ್ತಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಕರೊನಾ ಭಯ ಇಲ್ಲ ಎಂಬುದಾಗಿ ಜನರು ತೀರ್ಮಾನಿಸಬಾರದು. ಜನರು ಮನೆ ಹತ್ತಿರದ ಮೆಡಿಕಲ್ ಶಾಪ್ ಮತ್ತು ಅಂಗಡಿಗಳಿಗೆ ತೆರಳಿ ಖರೀದಿ ಮಾಡಬೇಕು ಎಂದರು.
ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಜಿಲ್ಲೆಯಲ್ಲಿ ಲಾಕ್ಡೌನ್ ಘೋಷಣೆ ಆದ ಬಳಿಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ 550ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಬೈಕ್ನಲ್ಲಿ ಒಬ್ಬರಿಗೆ ಹಾಗೂ ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದೆ ಎಂದರು.
ಉಡುಪಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ಉಡುಪಿ ತಹಶೀಲ್ದಾರ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.