ಅನುಭವ, ಬದ್ಧತೆ, ಪರಿಸರ ಕಲಾವಿದನ ಕಲಾಕೃತಿಗೆ ಸ್ಫೂರ್ತಿ: ಬಾಲನ್ ನಂಬಿಯಾರ್
ಮಂಗಳೂರು: ಕಲಾವಿದನ ಕಲೆಗೆ ಆತ ಬದುಕಿದ ಪರಿಸರವೇ ಸ್ಫೂರ್ತಿ ನೀಡಬಹುದು. ಅನುಭವ ಮತ್ತು ಬದ್ಧತೆ ಆತನಿಂದ ಶ್ರೇಷ್ಠ ಕಲಾಕೃತಿಯನ್ನು ನಿರ್ಮಿಸುವಂತೆ ಮಾಡಬಹುದು ಎಂದು ದೇಶದ ಖ್ಯಾತ ಕಲಾವಿದ, ದಿಲ್ಲಿಯ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಲನ್ ನಂಬಿಯಾರ್ ತಿಳಿಸಿದರು.
ಇನೋಳಿ ಬಿಐಟಿ ಆವರಣದಲ್ಲಿರುವ ಬೀಡ್ಸ್ (ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್)ನಲ್ಲಿ ಸೋಮವಾರದಿಂದ ಬುಧವಾರದವರೆಗೆ ನಡೆಯಲಿರುವ ಬೇಸಿಕ್ ಡಿಸೈನ್ ಕಾರ್ಯಾಗಾರಕ್ಕೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೇರಳದ ಉತ್ತರ ಭಾಗದಿಂದ ಉಡುಪಿಯ ಕುಂದಾಪುರ ನಡುವಿನ ಪ್ರದೇಶದಲಿ ್ಲಅತ್ಯಂತ ಸಮೃದ್ಧವಾದ ಜನಪದ ಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಿದ ಆಶ್ಚರ್ಯಕರವಾದ ವಿಶಿಷ್ಟವಾದ ಪ್ರದರ್ಶನ ಜನಪದ ಕಲಾ ಪ್ರಕಾರಗಳಲ್ಲಿ ಕಲಾವಿದನಿಗೆ ಬೇಕಾದ ವಸ್ತುಗಳಿವೆ. ಕರಾವಳಿಯ ಭೂತಕೋಲ, ಕೇರಳದ ತೈಯಂ ಕಲಾ ಪ್ರಕಾರಗಳ ವರ್ಣ ಸಂಯೋಜನೆ, ವೇಷ ಭೂಷಣಗಳು, ವಿನ್ಯಾಸ, ಸೃಜನ ಶೀಲ ಕಲಾವಿದನ ತಿಳುವಳಿಕೆಯನ್ನು ವೃದ್ಧಿಸುತ್ತವೆ ಎನ್ನುವುದು ನನ್ನ ಅನುಭವ. ನಿಸರ್ಗದಲ್ಲಿರುವ ಹೂ, ಗಿಡ, ಮರ, ಬಳ್ಳಿ ನನ್ನ ಕಲಾವಿನ್ಯಾಸದ ಮರು ಸೃಷ್ಟಿಗೆ ಕಾರಣವಾಗಿದೆ. ಕಲೆ ಸಂಕೇತವಾಗಿ ಜನರ ಮುಂದಿರುತ್ತವೆ ಹೊರತು ಕಥೆಯಂತೆ ಎಲ್ಲಾ ವಿವರಗಳ ಚಿತ್ರಣವನ್ನು ನೀಡುವುದಿಲ್ಲ. ಒಂದು ಕಲಾಕೃತಿಯಲ್ಲಿ ಕೆಲವು ಗಣಿತದ ಸೂತ್ರಗಳು, ವಿನ್ಯಾಸಗಳು, ಸಂಕೇತಗಳು, ವರ್ಣ ಸಂಯೋಜನೆಗಳು, ನಿಸರ್ಗದತ್ತವಾದ ಸೂತ್ರಗಳು ಸತತ ಪರಿಶ್ರಮದೊಂದಿಗೆ ಸೃಜನಶೀಲ ಯೋಚನೆಯೊಂದಿಗೆ ಸಂಯೋಜನೆಗೊಂಡಾಗ ಒಂದು ಉತ್ತಮ ಕಲಾಕೃತಿ ಮೂಡಿಬರಬಹುದು ಎಂದು ಕಲಾವಿದ ಬಾಲನ್ ನಂಬಿಯಾರ್ ತಿಳಿಸಿದರು.
ನಾನು ನನ್ನ ಬಾಲ್ಯದಲ್ಲಿ ನೋಡಿದ ಘಟನೆಗಳು, ನನ್ನ ಬಾಲ್ಯದ ನೆನಪುಗಳು, ವಾತಾವರಣ ನನ್ನ ಕಲಾಕೃತಿಗೆ ಸ್ಫೂರ್ತಿ ನೀಡಿದೆ. ನಮ್ಮ ಸುತ್ತ ಮುತ್ತಲಿನ ವಸ್ತುಗಳ ಕಲಾ ವಿನ್ಯಾಸವನ್ನು ನಮಗೆ ಗುರುತಿಸಲು ಸಾಧ್ಯವಾದರೆ ಅದನ್ನು ಮರು ಸೃಷ್ಟಿಸುವುದು ಕಲಾವಿದನ ಸವಾಲಾಗಿದೆ. ನಾನು ಇಂತಹ ಮರು ಸೃಷ್ಟಿಗೆ ಹೆಚ್ಚಿನ ಗಮನ ಹರಿಸಿದ್ದೇನೆ ಹೊರತು ಅನುಕರಣೆ ಮಾಡಿಲ್ಲ. ಲೋಹದ (ಸ್ಟೀಲ್) ಕಲಾಕೃತಿಯ ರಚನೆಗೆ ಹೆಚ್ಚಿನ ಗಮನಹರಿಸಿದ್ದೇನೆ. ಈ ಕೃತಿಗಳು ದೀರ್ಘಕಾಲ ಬಾಳಿಕೆ ಬರುವ ಕಲಾಕೃತಿಗಳಾಗಿವೆ ಎಂದು ಬಾಲನ್ ನಾಯರ್ ತಿಳಿಸಿದರು.
ಉತ್ತಮ ಕಲಾವಿದನಾಗಲು ಬಳಸುವ ಸಾಮಗ್ರಿಗಳ ಮೇಲಿನ ಹಿಡಿತ, ಕಲೆಯ ಮೂಲಕ ಜನರನ್ನು ಸಮರ್ಥವಾಗಿ ತಲುಪುವುದು, ಹೊಸತರ ಸೃಷ್ಟಿಯ ವಿಚಾರಗಳಲ್ಲಿ ಕಲಾವಿದ ತನ್ನನ್ನು ಹೆಚ್ಚು ತೆರೆದುಕೊಂಡಾಗ ಉತ್ತಮ ಕಲಾವಿದ, ವಿನ್ಯಾಸಕಾರನಾಗಲು ಸಾಧ್ಯ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡುತ್ತಾ, ಹಿರಿಯ ಕಲಾವಿದ ಬಾಲನ್ ನಂಬಿಯಾರ್‌ರ ಅನುಭವಗಳು ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದರು.
ಕಲಿಕೆಯಲ್ಲಿ ಕಣ್ಣಿನಿಂದ ನೋಡುವುದರಿಂದ ಮತ್ತು ಕೃತಿಯನ್ನು ಮಾಡುವುದರಿಂದ ಹೆಚ್ಚು ಕಲಿತುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯಾಗಾರ ಹೆಚ್ಚು ಸಹಕಾರಿ ಎಂದು ಬೀಡ್ಸ್‌ನ ಪ್ರಾಂಶುಪಾಲ ಭವೇಶ್ ಮೆಹ್ತಾ ತಿಳಿಸಿದರು.
ಕಲಾವಿದೆ ಅವೆಲಿನಾ, ಡಾ.ಅಖ್ತರ್ ಹುಸೈನ್ ಹಾಗೂ ಬೀಡ್ಸ್‌ನ ಉಪನ್ಯಾಸಕರಾದ ಕರೀಂ, ಅಝೀಝ್ ಮುಸ್ತಫ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡೀನ್ ಮುಹಮ್ಮದ್ ನಿಸಾರ್ ವಂದಿಸಿದರು. ಅಫ್ರಾ ಕಾರ್ಯಕ್ರಮ ನಿರೂಪಿಸಿದರು.