ಅಪ್ರಾಪ್ತೆಯ ಅಪಹರಣ, ಅತ್ಯಾಚಾರ ಪ್ರಕರಣ; ಐವರು ಆರೋಪಿಗಳು ಸೆರೆ
ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಬೇರೆ ಬೇರೆ ದಿನಗಳಲ್ಲಿ ಅತ್ಯಾಚಾರ ನಡೆಸಿದ ಆರೋಪದಲ್ಲಿ ಆರು ಮಂದಿಯಲ್ಲಿ ಐದು ಮಂದಿಯನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತರನ್ನು ಇಳಂತಿಲ ಗ್ರಾಮದ ಅಣಬೆಕೋಡಿ ಮನೆಯ ಚಂದ್ರಾಕ್ಷ (25), ಉರುವಾಲು ಗ್ರಾಮದ ಜನತಾ ಕಾಲನಿ ನಿವಾಸಿ ಸಂದೀಪ್ ಕುಮಾರ್ (23), ಕಣಿಯೂರು ಗ್ರಾಮದ ಬರಂಬು ಮನೆ ನಿವಾಸಿ ಹರ್ಷೇಂದ್ರ (24), ಕಣಿಯೂರು ಗ್ರಾಮದ ನಾಲೋಡಿ ಮನೆ ನಿವಾಸಿ ಲವ ಕುಮಾರ್ (27) ಹಾಗೂ ಶಿಶಿಲ ಗ್ರಾಮದ ಪೊಲಿಪುಮನೆ ನಿವಾಸಿ ಲಕ್ಷ್ಮೀಶ ಯಾನೆ ಚರಣ್ (24) ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಚಂದ್ರಾಕ್ಷ ಎಂಬಾತನ ಮೇಲೆ ಬಾಲಕಿಯ ಅಪಹರಣ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿ ಮಿಥುನ್ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಜು. 17ರ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದಳು. ಈಕೆಯ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು 16ರ ಹರೆಯದ ಈ ಬಾಲಕಿಯು ಬೆಂಗಳೂರಿಗೆ ಪರಾರಿಯಾಗುವ ಯತ್ನದಲ್ಲಿದ್ದಾಗ ಹಾಸನದಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದರು.
ಈಕೆ ಚಂದ್ರಾಕ್ಷ ಎಂಬಾತನೊಂದಿಗೆ ತೆರಳಿದ್ದು, ಈತ ಆಕೆಯನ್ನು ಅತ್ಯಾಚಾರ ನಡೆಸಿ, ಬೆಂಗಳೂರಿನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿರಿಸಲು ಸಿದ್ಧತೆ ನಡೆಸಿ, ಅದರಂತೆ ಬೆಂಗಳೂರಿಗೆ ಕಳುಹಿಸಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ತಿಳಿದು ಬಂತು. ಈಕೆಯ ಮೊಬೈಲ್ ಫೋನ್ ಅನ್ನು ತೆಗೆದು ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ ಹಲವರಲ್ಲಿ ಈಕೆಗೆ ಮೊಬೈಲ್ ಸಂಪರ್ಕ ಇರುವುದು ತಿಳಿದು ಬಂದು, ಈಕೆಯನ್ನು ಇನ್ನಷ್ಟು ವಿಚಾರಣೆ ನಡೆಸಿದಾಗ ಒಟ್ಟು ಆರು ಮಂದಿ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಕಡೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಬಳಿಕ ಈಕೆ ನೀಡಿದ ಸುಳಿವನ್ನಾಧರಿಸಿ ಇವರಲ್ಲಿ ಐದು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.