Home Mangalorean News Kannada News ಅಬ್ದುಲ್ ಕಲಾಂ ವ್ಯಕ್ತಿತ್ವ ವಿಶ್ವಕ್ಕೆ ನಂದಾದೀಪ – ಸಿಸ್ಟರ್ ಸೆಲಿನ್ ವೀರಾ

ಅಬ್ದುಲ್ ಕಲಾಂ ವ್ಯಕ್ತಿತ್ವ ವಿಶ್ವಕ್ಕೆ ನಂದಾದೀಪ – ಸಿಸ್ಟರ್ ಸೆಲಿನ್ ವೀರಾ

Spread the love

“ಅಬ್ದುಲ್ ಕಲಾಂ ವ್ಯಕ್ತಿತ್ವ ವಿಶ್ವಕ್ಕೆ ನಂದಾದೀಪ” – ಸಿಸ್ಟರ್ ಸೆಲಿನ್ ವೀರಾ

ಮಂಗಳೂರು : ತಾಯಿ, ತಂದೆ, ಒಡಹುಟ್ಟಿದವರಲ್ಲಿ ಹಾಗೂ ಗುರುಹಿರಿಯರಲ್ಲಿ ದೇವರನ್ನು ಕಂಡ ಅತ್ಯಂತ ಅಪರೂಪದ ವ್ಯಕ್ತಿಯೇ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ. ಬಾಲ್ಯ ಪ್ರಾಯದಿಂದಲೂ ಶ್ರದ್ಧೆ ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿಯ ಜೀವನದ ಮೂಲಕ ಬೆಳೆದು ಬಂದ ಕಲಾಂರವರು ಅತ್ಯಂತ ಕಷ್ಟ ಕಾಲದಲ್ಲಿಯೂ ಕೂಡ ಯಾರ ಬಳಿಯೂ ಕೈಯೊಡ್ಡದೆ ತನ್ನ ಸ್ವಂತ ಪರಿಶ್ರಮದಿಂದ ಉನ್ನತ ವ್ಯಾಸಂಗವನ್ನು ಪಡೆಯುವುದರ ಮೂಲಕ ಬಾಹ್ಯಕಾಶ ವಿಜ್ಞಾನದ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸುವುದರೊಂದಿಗೆ ಭಾರತ ಮಾತೆಯ ಕೀರ್ತಿಪತಾಕೆಯನ್ನು ಜಗತ್ತಿನ ಅತ್ಯಂತ ಎತ್ತರಕ್ಕೆ ಹಾರಿಸಲು ಸದಾ ಶ್ರಮಿಸಿ, ತನ್ನ ಅಧಿಕಾರ ಅವಧಿಯಲ್ಲಿ ದೇಶವಾಸಿ ಬಂಧುಗಳೊಂದಿಗೆ ಅದರಲ್ಲೂ ಮಕ್ಕಳು ಹಾಗೂ ಯುವಜನರೊಂದಿಗೆ ಅತ್ಯಂತ ಭಾವನಾತ್ಮಕವಾದ ಸಂಬಂಧವನ್ನು ಇರಿಸಿಕೊಂಡು ಅವರ ಜೀವನಕ್ಕೆ ಮಾರ್ಗದರ್ಶಕ ನುಡಿಗಳನ್ನ ಸದಾ ನೀಡಿ ಅವರ ಬದುಕು ಸಾರ್ಥಕವಾಗುವಂತೆ ಪ್ರಯತ್ನಿಸಿದ ಮಾಜಿ ರಾಷ್ಟ್ರಪತಿ, ಅಗ್ನಿರೆಕ್ಕೆ ಎಂದೇ ಹೆಸರುವಾಸಿಯಾದ ಡಾ| ಎ.ಪಿ.ಜೆ. ಅಬ್ದುಲ್ ಕಲಾಂರವರ ವ್ಯಕ್ತಿತ್ವ ಇಡೀ ವಿಶ್ವಕ್ಕೆ ಒಂದು ನಂದಾದೀಪ ಇದ್ದಂತೆ. ಇಂತಹ ವ್ಯಕ್ತಿಯ ಅಗಲುವಿಕೆಯಿಂದಾಗಿ ನಮ್ಮ ದೇಶವು ಅತ್ಯಂತ ಅಮೂಲ್ಯ ಹಾಗೂ ಬೆಲೆಕಟ್ಟಲು ಅಸಾದ್ಯವಾದಂತಹ ರತ್ನವನ್ನು ಕಳೆದುಕೊಂಡಿದೆ ಎಂದು ಹೇಳಲು ತುಂಬಾ ನೋವಾಗುತ್ತಿದೆ. ಆದರೂ ಅವರು ಹಾಕಿಕೊಟ್ಟ ಆದರ್ಶ ಜೀವನದ ಅಡಿಪಾಯ ಇಡೀ ಜಗತ್ತಿಗೆ ಮಾದರಿ ಎಂದು ಲೇಡಿಹಿಲ್ ವಿಕ್ಟೋರಿಯಾ ಕ್ರೈಸ್ತ ಸನ್ಯಾಸಿನಿಯರ ಮಠದ ಜ್ಯೇಷ್ಠರಾಗಿರುವ ಭಗಿನಿ ಸೆಲಿನ್‍ವೀರಾ ಹೇಳಿದರು.

ಅವರು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಇವರ ವತಿಯಿಂದ ಉರ್ವಸ್ಟೋರ್ ಕೋಟೆಕಣಿಯಲ್ಲಿ ಸೇವಾ ಭಾರತಿಯ ವತಿಯಿಂದ ನಡೆಸಲ್ಪಡುತ್ತಿರುವ ರೋಮನ್ ಕ್ಯಾಥರಿನ್ ಲೋಬೋ ಅಂಧಮಕ್ಕಳ ಶಾಲೆಯಲ್ಲಿ ಆಯೋಜಿಸಲ್ಪಟ್ಟ ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂರವರ ದ್ವಿತೀಯ ಪುಣ್ಯತಿಥಿ ಕಾರ್ಯಕ್ರಮ “ಕಲಾಂ ಒಂದು ನೆನಪು” ಇದರಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣವನ್ನು ಮಾಡಿದರು. ಕಲಾಂರವರು ಇವತ್ತು ನಮ್ಮ ಜೊತೆ ಇಲ್ಲದೇ ಇದ್ದರೂ ಅವರ ಆದರ್ಶ ಜೀವನ ನಮ್ಮೆಲ್ಲರಿಗೂ ಒಂದು ದೀಪದಂತೆ ಎಂದು ಅವರು ಹೇಳಿದರು. ಆ ದೀಪದ ಬೆಳಕಿನಲ್ಲಿ ಇಡೀ ಭಾರತೀಯ ಸಮುದಾಯ ಒಗ್ಗಟ್ಟಾಗಿ ಮುನ್ನಡೆಯುವುದು ನಮ್ಮೆಲ್ಲರ ಪರಮ ಕರ್ತವ್ಯ ಎಂದು ಅವರು ಹೇಳಿದರು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ನಗರ ಸಭೆಯ ಮಾಜಿ ಕೌನ್ಸಿಲರ್ ಹಾಗೂ ಉದ್ಯಮಿ ರಿಚರ್ಡ್ ಡಿಕೋಸ್ಟಾರವರು ಮಾತನಾಡುತ್ತಾ ಅಬ್ದುಲ್ ಕಲಾಂರವರ ಈ ಪುಣ್ಯತಿಥಿಯ ಕಾರ್ಯಕ್ರಮವನ್ನು ಇಲ್ಲಿನ ಅಂಧಮಕ್ಕಳ ಶಾಲೆಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಮಾತ್ರವಲ್ಲದೆ ಕಲಾಂರವರ ಜೀವನದಲ್ಲಿ ಬಹಳ ಪ್ರಮುಖವಾಗಿದ್ದ ಒಂದು ವಿಷಯವನ್ನು ಇಲ್ಲಿ ಕಾರ್ಯರೂಪದಲ್ಲಿ ನಡೆಸಿರುವುದು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸಿದ್ಧಾಂತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ವೇದಿಕೆಯ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೆಸ್ಸೆಸ್ ಮಹಾನಗರ ಸಂಘಚಾಲಕರಾಗಿರುವ ಡಾ| ಸತೀಶ್ ರಾವ್ ಇವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಲಾಂರವರ ಸ್ಮರಣೆಯೊಂದಿಗೆ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯ ಉದ್ದೇಶವನ್ನು ಡಾ| ಸತೀಶ್ ರಾವ್‍ರವರು ಮನಃಪೂರ್ವಕವಾಗಿ ಕೃತಜ್ಞತೆಯೊಂದಿಗೆ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಗಿನಿಯರಾದ ಸಿ| ತೇಜಸ್ವಿ, ಸಿ| ಅನ್ಸಿಲಾ, ಸಿ| ಮಾರಿಯೆಟ್, ಸಿ| ಪ್ರಿಯಾಂಕ, ಶಿಕ್ಷಕಿ ಐರಿನ್, ಶಿಕ್ಷಕಿ ಜೇನ್ ಬಾರೆಟ್ಟೋ ಹಾಗೂ ಸ್ಥಳೀಯರಾದ ಶ್ರೀಮತಿ ಜ್ಯೂಲಿಯಟ್ ಡಿಕುನ್ಹಾ, ಶ್ರೀಮತಿ ನಿರ್ಮಲಾ ಇವರು ಸ್ವಯಂಪ್ರೇರಣೆಯಿಂದ ನೇತ್ರದಾನಕ್ಕೆ ತಮ್ಮ ಒಪ್ಪಿಗೆ ಪತ್ರವನ್ನು ಡಾ| ಸತೀಶ್ ರಾವ್ ಇವರಿಗೆ ಅರ್ಪಿಸಿದರು.

ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೊ ಸ್ವಾಗತಿಸಿ ವಂದಿಸಿದರು. ಪ್ರಾರಂಭದಲ್ಲಿ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿ ರಾಕೇಶ್ ವಂದೇ ಮಾತರಂ ಹಾಡಿದರು. ಹಾಗೂ ಶಾಲೆಯ ವಿದ್ಯಾರ್ಥಿಗಳು ಅಬ್ದುಲ್ ಕಲಾಂರವರ ಬಗ್ಗೆ ಅವರ ಜೀವನ ಚರಿತ್ರೆಯನ್ನು ಸಭೆಗೆ ತಮ್ಮದೇ ಶೈಲಿಯಲ್ಲಿ ಪರಿಚಯಿಸಿದರು. ವೇದಿಕೆಯ ಪ್ರಮುಖರಾದ ರೋಶನ್ ಡಿ’ಸೋಜ ಅಶೋಕನಗರ, ಮೆಲ್ವಿನ್, ಕೆವಿನ್, ಜೋಯಿಸ್ ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version