ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಷ್ಟ್ರೀಯತೆಗೆ ಧಕ್ಕೆ : ಅಮಿತ್ ಶಾ
ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದಲ್ಲಿ ರಾಷ್ಟ್ರೀಯತೆಯನ್ನು ಪ್ರಶ್ನೆ ಮಾಡುವ ವ್ಯಕ್ತಿಗಳನ್ನು ನಿರ್ಲಕ್ಷಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಅವರು ಭಾನುವಾರ ಬಿಜೆಪಿ ನೇತೃತ್ವದ ತಿರಂಗಾ ಯಾತ್ರೆಯ ಪ್ರಯುಕ್ತ ಕೊಣಾಜೆ ಮಂಗಳಾ ಸಭಾಂಗಣದಲ್ಲಿ ನಡೆದ ರಾಣಿ ಅಬ್ಬಕ್ಕ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಕೆಲವು ಕಡೆ, ಕೆಲವು ಮಂದಿ ರಾಷ್ಟ್ರವಾದದ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ರಾಷ್ಟ್ರವಾದ ಇಲ್ಲದೇ ಹೋಗಿದ್ದರೆ ನಮಗೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ. ರಾಷ್ಟ್ರ ವಿರೋಧಿ ವಾದಕ್ಕೆ ಸ್ವಾತಂತ್ರ್ಯದ ಉಡುಗೆ ತೊಡಿಸುವ ಅಗತ್ಯ ಇಲ್ಲ. ದೇಶಪ್ರೇಮವನ್ನು ಪ್ರಶ್ನಿಸುತ್ತಿರುವವರು ದೇಶದ ಇತಿಹಾಸವನ್ನು ಅರಿಯಲಿ ಎಂದರು.
ರಾಷ್ಟ್ರಿಯತೆ ರಾಷ್ಟ್ರಪೇಮದ ಆಧಾರದಲ್ಲಿ ನಮಗೆ ಸ್ವಾತಂತ್ರ್ಯ ದೊರೆತಿದೆ. ರಾಷ್ಟ್ರಿಯತೆ ಇಲ್ಲದಿರುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ. ದೊರೆತ ಕಾರಣದಿಂದಲೇ ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು ಎಂದರು.
ರಾಷ್ಟ್ರದ ವಿರುದ್ದ ಮಾತನಾಡುವವರು ದೇಶದ ಇತಿಹಾಸ ಓದಿ. ಹಾಗಾದಾಗ ಮಾತ್ರ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸ್ವಾತಂತ್ರ್ಯಕ್ಕಾಗಿ ಎಷ್ಟು ಮಂದಿಯ ಬಲಿದಾನ ಆಗಿದೆ ಎನ್ನುವುದು ಗೊತ್ತಾಗುತ್ತದೆ. ಅವರೆಲ್ಲರ ಬಲಿದಾನಕ್ಕೆ ಕಾರಣವಾದದ್ದು ರಾಷ್ಟ್ರಭಕ್ತಿ ಮಾತ್ರ. ರಾಷ್ಟ್ರ ಭಕ್ತಿ ಇಲ್ಲದಿದ್ದರೆ ಭಗತ್ ಸಿಂಗ್, ಸುಖದೇವ್ ಅವರಂಥ ಹೋರಾಟಗಾರರು ನೇಣುಗಂಬ ಏರುತ್ತಿರಲಿಲ್ಲ. ರಾಷ್ಟ್ರೀಯತೆ ಇಲ್ಲದಿದ್ದರೆ ರಾಷ್ಟ್ರದ ಅಸ್ತಿತ್ವವೇ ಇಲ್ಲ. ಅದನ್ನು ಮೊದಲು ಅರಿತುಕೊಳ್ಳಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಯೂರಪ್ಪ, ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ ವಿನಯ್ ಹೆಗ್ಡೆ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳಿಧರ್ ರಾವ್, ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಸುನಿಲ್ ಕುಮಾರ್, ಸಿಟಿ ರವಿ ಮತ್ತಿತರು ಉಪಸ್ಥಿತರಿದ್ದರು.