Home Mangalorean News Kannada News ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಕಾಶ್ ರೈಗೆ ದಲಿತ ದಮನಿತರ ಬೆಂಬಲ

ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಕಾಶ್ ರೈಗೆ ದಲಿತ ದಮನಿತರ ಬೆಂಬಲ

Spread the love

ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಕಾಶ್ ರೈಗೆ ದಲಿತ ದಮನಿತರ ಬೆಂಬಲ

ಉಡುಪಿ : ಕರಾವಳಿಯ ಪ್ರಸಿದ್ಧ ಲೇಖಕ- ವಿಚಾರವಾದಿ ಕೋಟ ಶಿವರಾಮ ಕಾರಂತರ ಹೆಸರಲ್ಲಿ ಕಾರಂತ ಪ್ರತಿಷ್ಠಾನ ನೀಡುತ್ತಿರುವ ‘ ಕಾರಂತ ಹುಟ್ಟೂರ ಪ್ರಶಸ್ತಿ’ಗೆ ಆಯ್ಕೆಯಾಗಿರುವ ನಟ ಪ್ರಕಾಶ್ ರೈಯವರು ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿ ನೀಡಿರುವ ಹೇಳಿಕೆಯಿಂದ ಅವರಿಗೆ ನೀಡುತ್ತಿರುವ ಪ್ರಶಸ್ತಿಯನ್ನು ತಡೆ ಹಿಡಿಯಬೇಕು ಇಲ್ಲವಾದಲ್ಲಿ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಕೆಲವು ಸಂಘಟನೆಗಳು ನೀಡುತ್ತಿರುವ ಬೆದರಿಕೆಯನ್ನು ಖಂಡಿಸಿರುವ ಉಡುಪಿ ಜಿಲ್ಲಾ  ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ (ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ) ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ನಟ ಪ್ರಕಾಶ ರೈಯವರ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದೆ.

ತನ್ನ ನೇರ ನಡೆ-ನುಡಿಗಳಿಗೆ ಹೆಸರಾದ ಶಿವರಾಮ ಕಾರಂತರು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಯಾವತ್ತೂ ಬೆಂಬಲಿಸಿದವರಲ್ಲ, ಆ ಹಿನ್ನಲೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ಆಗಮಿಸಲಿರುವ ಪ್ರಕಾಶ್ ರೈಯವರ ಜೊತೆ ಒಕ್ಕೂಟ ನಿಲ್ಲಲಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಅವರ ಬೆಂಬಲಕ್ಕೆ ಜೊತೆಯಾಗಲಿದೆ.

ಕರ್ನಾಟಕದ ಪತ್ರಕರ್ತೆ, ಸಾಮಾಜಿಕ ಚಳುವಳಿಗಳ ಜೊತೆಗಾತಿ ಗೌರಿ ಲಂಕೇಶ್ ರ ಹತ್ಯೆಯನ್ನು ದೇಶ ವಿದೇಶಗಳ ಜನ ಖಂಡಿಸುತ್ತಿರುವಾಗ  ದೇಶದ ಪ್ರಧಾನಿಯಾದ ಮೋದಿಯವರು ಇದನ್ನು ಖಂಡಿಸಿಲ್ಲ ಮತ್ತು ಅವರ ಟ್ವಿಟ್ಟರ್ ಖಾತೆಯಲ್ಲಿರುವವರು ಕೀಳು ಅಭಿರುಚಿಯಲ್ಲಿ ಹತ್ಯೆಯನ್ನು ಸಂಭ್ರಮಿಸುವುದರ ವಿರುದ್ಧ ಕನಿಷ್ಠ ಸಂವೇದನಾ ರಹಿತರಾಗಿ ಇರುವುದನ್ನು ಪ್ರಕಾಶ್ ರೈ ಖಂಡಿಸಿರುವುದನ್ನೇ ನೆಪವಾಗಿರಿಸಿಕೊಂಡು ಜಿಲ್ಲೆಯ ಗೌರವಕ್ಕೆ ಕುಂದುಂಟು ಮಾಡುವ ಮತ್ತು ಶಿವರಾಮ ಕಾರಂತರ ವ್ಯಕ್ತಿತ್ವಕ್ಕೆ ಅಪಮಾನ ಮಾಡುವುದನ್ನು ಒಕ್ಕೂಟ ಯಾವತ್ತೂ ಸಹಿಸಲಾರದು. ಪ್ರಧಾನಿಯವರನ್ನು ಪ್ರಶ್ನಿಸಬಾರದು, ಅವರ ನಿಲುವನ್ನು ಟೀಕಿಸಬಾರದು ಎನ್ನುವುದು ಒಂದು ರೀತಿಯಲ್ಲಿ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿ ಇದೆಯೇ ಎಂಬ ಸಂಶಯವನ್ನು ಹುಟ್ಟು ಹಾಕುತ್ತಿದ್ದು, ಇದರ ವಿರುದ್ಧ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಒಕ್ಕೂಟ ಸಂವಿಧಾನ ರೀತಿಯಲ್ಲಿ ಕಾರ್ಯ ನಡೆಸಲಿದೆ. ಅಷ್ಟಕ್ಕೂ ಪ್ರಧಾನಿ ಮೋದಿಯವರನ್ನು ಟೀಕಿಸುವುದನ್ನು ಸಹಿಸದವರು ಈ ಹಿಂದಿನ ಪ್ರಧಾನಿಗಳ ವಿರುದ್ಧ ಬಾಯಿ ಬಡಕೊಂಡು ಟೀಕಿಸುತ್ತಿದ್ದುದನ್ನು ಮರೆಮಾಚುವುದು ಯಾಕೆ ಎಂಬ ಪ್ರಶ್ನೆ ಏಳುತ್ತದೆ. ಇದನ್ನು ಮೋದಿ ಟೀಕೆಯನ್ನು ಸಹಿಸದವರು ನೆನಪಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಾವು ಮಾಡಿದರೆ ಸರಿ , ಇತರರು ಮಾಡಬಾರದು ಎಂಬ ನಿಲುವು ಅಂತವರದ್ದಾರೇ, ಅದನ್ನು ಯಾವತ್ತೂ ಸಹಿಸಲು ಸಾಧ್ಯವಿಲ್ಲ. ಜಿಲ್ಲಾಡಳಿತವು ಈ ಬಗ್ಗೆ ಗಮನ ಹರಿಸಿ, ಇಂತಹ ಸಮಾಜ ಘಾತುಕ ವ್ಯಕ್ತಿ – ಶಕ್ತಿಗಳನ್ನು ಮಟ್ಟ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರಂತರ ಹೆಸರಿನ ಸಮಾರಂಭವು ಯಾವುದೇ ಅಡ್ಡಿ ಆತಂಕಗಳಿಲ್ಲದೇ ನಡೆಯಲು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಮುನ್ನೆಚ್ಚರಿಕೆಯನ್ನು ನಡೆಸಬೇಕು ಎಂದು ಒಕ್ಕೂಟ ಆಗ್ರಹಿಸುತ್ತದೆ.


Spread the love

Exit mobile version