ಅಮಾಯಕ ಪತ್ನಿಯನ್ನು ವಂಚಿಸಿದ ಪತಿಯ ವಿದೇಶ ಪ್ರಯಾಣ ತಡೆಗೆ ಕೋರ್ಟ್ ಆದೇಶ
ಉಡುಪಿ: ವಿಧಿ ಪೂರ್ವಕವಾಗಿ ಕೈಹಿಡಿದ ಅಮಾಯಕ ಪತ್ನಿಯನ್ನು ವಂಚಿಸಿ ಎರಡನೇ ವಿವಾಹವಾದ ಕುಂದಾಪುರ ತಾಲೂಕಿನ ನಾಡಾ ಗ್ರಾಮದ ಜಗದೀಶ ಯಾನೆ ಜಗನ್ನಾಥ ವಿದೇಶಕ್ಕೆ ಪರಾರಿಯಾಗದಂತೇ ತಡೆಯಲು ಸೂಕ್ತಕ್ರಮ ಕೈಗೊಳ್ಳುವಂತೇ ಕುಂದಾಪುರ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾದೀಶರು ಪಾಸ್ಪೋರ್ಟ್ ಕಛೇರಿಯವರಿಗೆ ಆದೇಶ ಹೋರಡಿಸಿದ್ದಾರೆ. ಇದೀಗ ತನಗೆ ಹಾಗೂ ತನ್ನ ಮನೆಯವರಿಗೆ ತನ್ನ ಗಂಡ ಜಗದೀಶನಿಂದ ಸಂಪೂರ್ಣ ರಕ್ಷಣೆ ನೀಡಬೇಕೆಂದು ಅಮಿತಾ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ವಿನಂತಿಸಿದ್ದಾಳೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿ ಇದರ ಅಧ್ಯಕ್ಷರಾದ ಡಾ|ರವೀಂದ್ರನಾಥ್ ಶ್ಯಾನುಭಾಗ್ ಅವರು ಹೇಳಿದರು.
ಸೋಮವಾರ ನಗರದ ವೈಕುಂಠ ಬಾಳಿಗ ಕಾಲೇಜಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ಅರುವರ್ಷದ ಹಿಂದೆ ಐರೋಡಿ ಗ್ರಾಮದ ಅಮಿತಾ ಎಂಬ 22 ವರ್ಷದ ಅಮಾಯಕ ಹುಡುಗಿಯನ್ನು ಮದುವೆಯಾದ ಮುತ್ತಯ್ಯ ಆಚಾರ್ಯರ ಮಗ ಜಗದೀಶನು ನಾಡಾಗ್ರಾಮದ ತೆಂಕ ಬೈಲಿನಲ್ಲಿರುವ ತನ್ನ ಹಿರಿಯರ ಮನೆಯಲ್ಲಿ ಸಂಸಾರ ಹೂಡಿದ. ಮದುವೆಯಾದ ದಿನದಿಂದಲೂ ಗಂಡ ತನ್ನಲ್ಲಿ ಯಾವುದೇ ಪ್ರೀತಿ ವಾತ್ಸಲ್ಯ ತೋರಿಸದಿದ್ದರೂ ಅಮಿತಾ ತನ್ನ ಸಂಸಾರಿಕ ಕರ್ತವ್ಯವನ್ನು ಚಾಚೂತಪ್ಪದೇ ಪಾಲಿಸುತಿದ್ದಳು. ತನ್ನ ಗಂಡ ದಿನಾಲು ಸಿಡುಕು ಮತ್ತು ಕೋಪವನ್ನು ಪ್ರದರ್ಶಿಸುತ್ತಿರುವುದೇಕೆ ಎಂಬುದನ್ನು ತಿಳಿಯದ ಅಮಿತ ಎಲ್ಲಾ ಅವಮಾನಗಳನ್ನು ಸಹಿಸುತ್ತಿದ್ದಳು. ಕ್ಷುಲ್ಲಕ ಕಾರಣಗಳಿಗೆ ತನ್ನ ಮೇಲೆ ರೇಗುತ್ತಿದ್ದ ಗಂಡನನ್ನು ಸಹಿಸಿ ಒಂಟಿ ಬಾಳು ಸಾಗಿಸುತಿದ್ದಳು.
ಹಠಸಾಧನೆಗಾಗಿ ವಿವಾಹ
ಸುಮಾರು ಎರಡು ವರ್ಷಗಳ ಕಾಲ ಗಂಡನ ಕಿರುಕುಳಗಳನ್ನು ಸಹಿಸಿದ ಮೇಲೆ ಆತ ನೀಡುತಿದ್ದ ಹಿಂಸೆಯ ನಿಜವಾದ ಕಾರಣ ತಿಳಿಯಿತು. ಆತ ಈ ವಿವಾಹಕ್ಕೂ ಮೊದಲೇ ಗಾಣಿಗ ಸಮಾಜದ ಸುಜಾತ ಎಂಬ ಹುಡುಗಿಯೊಂದಿಗೆ ವಾಸವಾಗಿದ್ದು ದೈಹಿಕ ಸಂಬಂಧವನ್ನೂ ಇಟ್ಟು ಕೊಂಡಿದ್ದನಂತೆ. ಈ ವಿಚಾರ ಆತನ ತಾಯಿ ಕಮಲ ಹಾಗೂ ತಂದೆ ಮುತ್ತಯ್ಯ ಆಚಾರ್ಯರಿಗೆ ತಿಳಿದುಬಂದರೂ ತಮಗೆ ವಿಶ್ವಕರ್ಮ ಸಮುದಾಯದ ಸೊಸೆಯೇ ಬೇಕು ಎಂದು ಹಠಹಿಡಿದರು. ತನ್ನ ಮಗ ಈಗಾಗಲೇ ಇನ್ನೊರ್ವ ಹುಡುಗಿಯೊಂದಿಗೆ ದೈಹಿಕ ಸಂಬಂಧವನ್ನಿಟ್ಟುಕೊಂಡಿದ್ದಾನೆ ಎಂಬ ವಿಚಾರವನ್ನು ಮುಚ್ಚಿಟ್ಟು ಐರೋಡಿಯ ಪ್ರಭಾಕರ ಆಚಾರ್ಯ ಮನೆಗೆ ತೆರಳಿ ಅವರ ಮಗಳಾದ ಅಮಿತಾಳ ನೆಂಟಸ್ತಿಕೆಯನ್ನು ಕುದುರಿಸಿಯೇ ಬಿಟ್ಟರು. ತಮ್ಮ ಹಠಕ್ಕಾಗಿ ಅಮಾಯಕ ಬಾಲಕಿಯೋರ್ವಳನ್ನು ಬಲಿಗೊಟ್ಟರು.
ವಿವಾಹ ವಿಚ್ಚೇದನಕ್ಕೆ ಅರ್ಜಿ
2014ರಲ್ಲಿ ಈ ಕುರಿತು ಎಲ್ಲಾ ವಿಚಾರಗಳು ಜಗಜ್ಜಾಹೀರಾದ ಮೇಲೆ ಎರಡೂ ಕುಟುಂಬದ ಹಿರಿಯರ ಸಭೆನಡೆದು ಗಂಡ ಜಗನ್ನಾಥ ಅಮಿತಾಳಿಗೆ 25ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು, ಹಾಗೂ ಆಕೆಯೊಂದಿಗಿನ ವಿವಾಹವನ್ನು ಕೋರ್ಟ್ ಡಿಕ್ರಿಯ ಮೂಲಕ ರದ್ದುಗೊಳಿಸಬೇಕು ಎಂದು ನಿರ್ಧಾರವಾಯಿತು. ವಿಚ್ಚೇದನ ಆದೇಶ ಸಿಕ್ಕಿದೊಡನೆ ಉಳಿದ ಹಣವನ್ನು ಪಾವತಿಸುವ ಅಶ್ವಾಸನೆಯೊಂದಿಗೆ ಜಗನ್ನಾಥ ಪರಿಹಾರದ ಮೊದಲ ಕಂತು 10ಲಕ್ಷ ರೂಪಾಯಿಗಳನ್ನು ಪಾವತಿಸಿದ. ಪರಸ್ಪರ ಒಪ್ಪಿಗೆಯ ಮೂಲಕ ವಿವಾಹ ವಿಚ್ಚೇದನಕ್ಕಾಗಿ ಸಿವಿಲ್ ಕೋರ್ಟಿಗೆ ಸಲ್ಲಿಸಬೇಕಾದ ಅರ್ಜಿಗೆ ಸಹಿಯನ್ನೂ ಹಾಕಿದ.
ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಾ ಅರ್ಜಿ ದಾಖಲಿಸಿದರೂ ಒಪ್ಪಂದದಂತೇ ಇನ್ನೂ ನೀಡಬೇಕಾದ 15 ಲಕ್ಷ ರೂಪಾಯಿಗಳನ್ನು ಪಾವತಿಸದಿರಲು ನಿರ್ಧರಿಸಿದ. ನ್ಯಾಯಾಲಯದ ವಿಚಾರಣೆಗಳಲ್ಲಿ ಹಾಜರಾಗುವುದನ್ನೇ ನಿಲ್ಲಿಸಿದ. ವಿಚ್ಛೇದನಕ್ಕಾಗಿ ಅನಗತ್ಯ ವಿಳಂಬ ಮಾಡಿದ್ದಲ್ಲಿ ಪರಿಹಾರ ಧನ ಉಳಿಸ ಬಹುದೆಂಬುದು ಆತನ ಹುನ್ನಾರ !
ಮಾನವಹಕ್ಕು ಪ್ರತಿಷ್ಠಾನಕ್ಕೆ ದೂರು.
ಅಮಿತಾ ಹಾಗೂ ಆಕೆಯ ಹೆತ್ತವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು ನೀಡಿ ನ್ಯಾಯಪಡೆಯಲು ಸಹಕಾರ ಯಾಚಿಸಿದರು. ಇಡೀ ಪ್ರಕರಣವನ್ನು ವಿಶ್ಲೇಷಿಸಿ ಅಮಿತಾಳಿಗೆ ಕಾನೂನಿನ ನೆರವು ನೀಡಲಾಯಿತು. ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಯಿತು. ಜಗನ್ನಾಥ ತನಗೆ ವಿಚ್ಛೇದನ ನೀಡದೇ ಎರಡನೇ ಹೆಂಡತಿಯೊಂದಿಗೆ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಭಿನ್ನವಿಸಿದಳು.
ಇದೇ ವೇಳೆ ನಾಡಾಗ್ರಾಮಕ್ಕೆ ಭೇಟಿ ನೀಡಿದ ಅಮಿತಾಳಿಗೆ ಇನ್ನೊಂದು ಶಾಕ್ ಕಾದಿತ್ತು. ಆಕೆ ಸ್ವತಃ ಸುಜಾತಳನ್ನು ಆಕೆಯ ಮನೆಯಲ್ಲಿ ಭೇಟಿಮಾಡಿದಾಗ ” ಜಗನ್ನಾಥ ಈಗಾಗಲೇ ನನ್ನನ್ನು ವಿವಾಹವಾಗಿದ್ದು ನಮಗೆ ‘ಕುಮಾರಿ ಐಸಿರಿ’ ಹಾಗೂ ‘ಕುಮಾರಿ ಐಶ್ನಿ’ ಎಂಬ ಎರಡು ಹೆಣ್ಣು ಮಕ್ಕಳೂ ಇದ್ದಾರೆ” ಎಂದು ಸುಜಾತ ತಿಳಿಸಿದ್ದಾಳೆ ಎಂದು ಅಮಿತಾ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾಳೆ.
ಇದೀಗ ಜಿಲ್ಲಾಧಿಕಾರಿ ಶ್ರೀಮತಿ ಪ್ರಿಯಾಂಕಾ ಪ್ರಾನ್ಸಿಸ್ ಮೇರಿಯವರು ನಿರ್ದೇಶನದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿಯವರು ಕುಂದಾಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು. ನ್ಯಾಯಾಧೀಶರು ಜಗನ್ನಾಥನ ವಿದೇಶ ಪ್ರಯಾಣಕ್ಕೆ ತಡೆನೀಡಿದ್ದಾರೆ. ಈ ದೂರು ಇತ್ಯಾರ್ಥವಾಗುವ ತನಕ ಅಮಿತಾಳಿಗೆ ಪ್ರತಿ ತಿಂಗಳು 2000 ರೂಪಾಯಿ ಪರಿಹಾರ ಧನ ನೀಡುವಂತೆ ಮಧ್ಯಂತರ ಆದೇಶವನ್ನೂ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಂಚನೆಗೊಳಗಾದ ಅಮಿತ ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.