Home Mangalorean News Kannada News ಅಮಿತ್ ಶಾ ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ?: ಸಿದ್ದರಾಮಯ್ಯ

ಅಮಿತ್ ಶಾ ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ?: ಸಿದ್ದರಾಮಯ್ಯ

Spread the love

ಅಮಿತ್ ಶಾ ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ?: ಸಿದ್ದರಾಮಯ್ಯ
 

ಬೆಂಗಳೂರು: ಬೆಂಗಳೂರು, ಎ.2: ಗೃಹ ಸಚಿವ ಅಮಿತ್ ಶಾ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕರ್ನಾಟಕದ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯನ್ನು ಉಳಿಸುವುದಕ್ಕೋ, ಕೆಡಿಸುವುದಕ್ಕೋ? ನೀವು ಕರ್ನಾಟಕಕ್ಕೆ ಕಾಲಿಟ್ಟಾಗೆಲ್ಲ ಕನ್ನಡಿಗರ ಮನಸ್ಸಿನಲ್ಲಿ ಇಂತಹದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ನೀವೇ ಕಾರಣವಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಚುನಾವಣೆ ಪ್ರಚಾರ ಸಮಾವೇಶಕ್ಕಾಗಿ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗೃಹಸಚಿವರನ್ನು ಸರಣಿ ಪ್ರಶ್ನೆಗಳನ್ನೇ ಮುಂದಿಟ್ಟು ಕುಟುಕಿದ್ದಾರೆ.

ಮಳೆ ಕೊರತೆಯಿಂದಾಗಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಅಂದಾಜು ರೂ.33,770 ಕೋಟಿಯಷ್ಟು ನಷ್ಟವಾಗಿದೆಯೆಂದು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ಅಂದಾಜು ಮಾಡಿತ್ತು. ಇದರಲ್ಲಿ ಕನಿಷ್ಠ ರೂ.17,901 ಕೋಟಿ ಪರಿಹಾರವನ್ನಾದರೂ ನೀಡಬೇಕೆಂಬುದು ಕರ್ನಾಟಕದ ಬೇಡಿಕೆ. ಇದಕ್ಕಾಗಿ ಪತ್ರದ ಮೇಲೆ ಪತ್ರ ಬರೆದೆವು, ಪ್ರಧಾನಿಯವರ ಜೊತೆ ಬರ ಪರಿಹಾರ ನೀಡುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾದ ನಿಮ್ಮನ್ನೂ ಭೇಟಿಯಾದೆವು. ಈ ವರೆಗೆ ಒಂದು ಪೈಸೆ ಪರಿಹಾರ ನೀಡಿಲ್ಲ. ಕರ್ನಾಟಕ-ಕನ್ನಡಿಗರ ಬಗ್ಗೆ ಯಾಕೆ ನಿಮಗೆ ಇಷ್ಟು ದ್ವೇಷ? ಎಂದು ಸಿದ್ದರಾಮಯ್ಯ ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ.

ಒಂದು ವಾರದೊಳಗೆ ಉನ್ನತಾಧಿಕಾರ ಸಮಿತಿಯ ಸಭೆ ಕರೆಯುತ್ತೇನೆ ಎಂದು ಕಳೆದ ಸೆಪ್ಟಂಬರ್ ನಲ್ಲಿ ನೀವು ನನಗೆ ಆಶ್ವಾಸನೆ ಕೊಟ್ಟಿದ್ದೀರಿ. ವಾರ ಕಳೆದು ತಿಂಗಳುಗಳ ಮೇಲೆ ತಿಂಗಳುಗಳು ಕಳೆದುಹೋಯಿತು. ಇಲ್ಲಿಯವರೆಗೆ ನೀವು ಸಭೆಯನ್ನೂ ಕರೆದಿಲ್ಲ, ಬರಪರಿಹಾರವನ್ನೂ ನೀಡಿಲ್ಲ. ಯಾಕೆ ಎಂದು ಕೇಳಿದ್ದಾರೆ.

ಈ ಅನ್ಯಾಯ ಇದೇ ಮೊದಲ ಸಲವೇನಲ್ಲ, 2017ರಲ್ಲಿಯೂ ಕರ್ನಾಟಕದಲ್ಲಿ ಬರಗಾಲ ಬಂದಿತ್ತು. ಇದರಿಂದಾಗಿ ಅಂದಾಜು ರೂ.30,000 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಆಗ ಕೇಂದ್ರ ಸರ್ಕಾರ ನೀಡಿದ್ದು ಕೇವಲ ರೂ.1,435 ಕೋಟಿ ಪರಿಹಾರ. ಅದೇ ವರ್ಷ ಮಹಾರಾಷ್ಟ್ರಕ್ಕೆ ರೂ.8,195 ಕೋಟಿ ಮತ್ತು ಗುಜರಾತ್ಗೆ ರೂ.3,894 ಕೋಟಿ ಪರಿಹಾರ ನೀಡಲಾಗಿತ್ತು. 2019ರಲ್ಲಿ ರಾಜ್ಯದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದಾಗಲೂ ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ನೀಡದೆ ಸತಾಯಿಸಿದ್ದೀರಿ. ಕನ್ನಡಿಗರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ. ಬಿಜೆಪಿಯನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಅವಕಾಶ ನೀಡದಿರುವುದೇ ಅಪರಾಧವಾಗಿ ಹೋಯಿತೇ?

ಕರಾವಳಿಯ ರೈತರೇ ಕಟ್ಟಿ ಬೆಳೆಸಿದ್ದ ವಿಜಯಾ ಬ್ಯಾಂಕನ್ನು ನುಂಗಿದ್ದು ಗುಜರಾತಿನ ಬರೋಡಾ ಬ್ಯಾಂಕ್. ಕಾಂಗ್ರೆಸ್ ನಾಯಕರ ಪ್ರಯತ್ನದಿಂದ ನಿರ್ಮಾಣಗೊಂಡಿದ್ದ ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ನಮ್ಮಿಂದ ಕಿತ್ತುಕೊಂಡದ್ದು ಗುಜರಾತ್ ನ ಉದ್ಯಮಿ ಅದಾನಿ. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ?

ನಮ್ಮ ರೈತರೇ ಕಟ್ಟಿರುವ ಕರ್ನಾಟಕದ ಹೆಮ್ಮೆಯ ಕೆಎಂ ಎಫ್ ಅನ್ನು ಗುಜರಾತ್ ನ ಅಮುಲ್ ಜೊತೆ ವಿಲೀನಗೊಳಿಸಲು ಹೂಡಿದ್ದ ಸಂಚನ್ನು ಕನ್ನಡಿಗರು ಮರೆತಿಲ್ಲ. ರಾಜ್ಯದಲ್ಲಿ ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ನೆರವಿನಿಂದ ಒಂದಷ್ಟು ದಿನ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಮಾಯಮಾಡಿ ಅಮುಲ್ ಉತ್ಪನ್ನಗಳು ಎಲ್ಲೆಲ್ಲೂ ರಾರಾಜಿಸುವಂತೆ ಮಾಡಿದ್ದು ನೀವೇ ಅಲ್ಲವೇ? ನಮ್ಮ ನಂದಿನಿಯನ್ನು ಉಳಿಸಲು ಕರ್ನಾಟಕದಾದ್ಯಂತ ಸ್ವಾಭಿಮಾನಿ ಕನ್ನಡಿಗರು ಎದ್ದು ನಿಂತಾಗ ಬೇರೆ ದಾರಿ ಕಾಣದೆ ನಿಮ್ಮ ದುರಾಲೋಚನೆಯನ್ನು ಕೈಬಿಟ್ಟದ್ದು ನಿಜ ಅಲ್ಲವೇ?

ಗೃಹ ಸಚಿವ ಅಮಿತ್ ಶಾ ಅವರೇ, ಕರ್ನಾಟಕದಲ್ಲಿ ಮತ ಕೇಳುವ ಮೊದಲು ಕನ್ನಡಿಗ ಮತದಾರರ ಪ್ರಶ್ನೆಗಳಿಗೆ ಉತ್ತರಿಸಿ.

ಜಗತ್ತಿನ ಯಾವ ಭಾಷೆಗೂ ನಮ್ಮ ವಿರೋಧ ಇಲ್ಲ. ಆದರೆ ಕನ್ನಡದ ನೆಲದಲ್ಲಿ ಕನ್ನಡ ಭಾಷೆಗೆ ಮೊದಲ ಪೂಜೆ ಸಲ್ಲಬೇಕೆನ್ನುವುದು ಮಾತ್ರ ಕನ್ನಡಿಗರ ನಿಲುವು. ಕನ್ನಡ ಧ್ವಜವನ್ನು ರೂಪಿಸಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿ ಆರು ವರ್ಷಗಳಾಗುತ್ತಾ ಬಂದರೂ ಇಲ್ಲಿಯ ವರೆಗೆ ಅದಕ್ಕೆ ಅನುಮೋದನೆ ನೀಡಿಲ್ಲ. ಕನ್ನಡ ಧ್ವಜದ ಬಗ್ಗೆ ಯಾಕೆ ನಿಮ್ಮ ವಿರೋಧ? ಉತ್ತರ ಕೊಡಿ.

ರಾಷ್ಟ್ರೀಕೃತ ಬ್ಯಾಂಕ್, ರೈಲ್ವೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ಸ್ವಾಮ್ಯದ ಎಲ್ಲ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನೂ ಮಾಧ್ಯಮವಾಗಿ ಬಳಸಲು ಅವಕಾಶ ಇರಬೇಕೆಂಬುದು ಕನ್ನಡಿಗರ ಬಹುವರ್ಷಗಳ ಬೇಡಿಕೆ. ಈ ಅವಕಾಶದಿಂದ ವಂಚಿತರಾದ ಉದ್ಯೋಗಾರ್ಥಿ ಕನ್ನಡಿಗ ಯುವಕಿ-ಯುವತಿಯರು ಉದ್ಯೋಗದಿಂದಲೂ ವಂಚಿತರಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ. ಇದಕ್ಕೆ ನೀವೇ ಹೊಣೆ ಅಲ್ಲವೇ?

ಹಿಂದಿ ಎನ್ನುವುದು ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಮತ್ತೆ ಮತ್ತೆ ಹೇಳಿ ಆ ಭಾಷೆಯನ್ನು ಕನ್ನಡಿಗರ ಮೇಲೆ ಹೇರುತ್ತಿರುವುದು ಯಾಕೆ? ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ಸಂವಿಧಾನ ಹೇಳಿದೆಯೇ? ಹೇಳಿದ್ದರೆ ಸಂವಿಧಾನದ ಯಾವ ಪರಿಚ್ಛೇದದಲ್ಲಿ ಹೇಳಲಾಗಿದೆ? ದಯವಿಟ್ಟು ಅದನ್ನು ಕನ್ನಡಿಗರ ಮುಂದೆ ತೆರೆದಿಡಿ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಯ ಆಧಾರದಲ್ಲಿ ಮತ ಕೇಳುವ ವಿಶ್ವಾಸ ನಿಮಗೆ ಇಲ್ಲ. ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳುವ ಸಹೃದಯತೆಯೂ ನಿಮಗೆ ಇಲ್ಲ. ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿ-ಸೌಹಾರ್ದ ಕೆಡಿಸಬಾರದೆಂಬ ಒಳ್ಳೆಯತನದ ವಿವೇಕವೂ ನಿಮಗೆ ಇಲ್ಲ. ನೀವು ನೀಡಿರುವ ಸಲಹೆಯಂತೆಯೇ ತಾವು ಗಲಭೆ ನಡೆಸುತ್ತಿರುವುದಾಗಿ ಮೈಸೂರಿನ ಮಾಜಿ ಸಂಸದನೊಬ್ಬ ಬಹಿರಂಗ ಹೇಳಿಕೆ ನೀಡಿದ್ದಾನೆ. ನೀವು ಹೋದಲ್ಲಿ ಬಂದಲ್ಲಿ ಗಲಭೆ ನಡೆದು ಶಾಂತಿ ಭಂಗವಾಗುತ್ತಿರುವುದಕ್ಕೆ ಇದೇ ಕಾರಣವೇ?

ಅಮಿತ್ ಶಾ ಅವರೇ, ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ, ಕನ್ನಡಿಗರಿಗೆ ದ್ರೋಹ ಎಸಗಬೇಡಿ, ಕನ್ನಡ ಭಾಷೆಯನ್ನು ತುಳಿಯಲು ಹೋಗಬೇಡಿ, ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಲು ಹೋಗಬೇಡಿ. ನಿಮ್ಮ ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡಿ. ಇದರಿಂದ ಗೌರವದ ಸೋಲನ್ನಾದರೂ ಪಡೆಯಬಹುದು. ಇದರ ಹೊರತಾಗಿ ಅಡ್ಡಮಾರ್ಗದ ಮೂಲಕ ಚುನಾವಣೆಯನ್ನು ಎದುರಿಸಲು ಹೊರಟರೆ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗುವುದು ಖಂಡಿತ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.


Spread the love

Exit mobile version