ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಮಸ್ತ ಹಿಂದುಗಳ ಭಾವನೆ : ಗಣೇಶ ರಾವ್
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ಸಮಸ್ತ ಹಿಂದುಗಳ ಭಾವನೆಯಾಗಿದೆ ಎಂದು ಕರಾವಳಿ ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ ರಾವ್ ಅಭಿಪ್ರಾಯಪಟ್ಟರು.
ಅವರು ಗುರುವಾರ ವಿಜಯ ಧ್ವಜದಲ್ಲಿ ನಡೆದ ನವೆಂಬರ್ 24ರಿಂದ 26ರ ವರೆಗೆ ಉಡುಪಿಯಲ್ಲಿ ಆಯೋಜಿಸಿರುವ ಧರ್ಮ ಸಂಸತ್ತು ಕಾರ್ಯಕ್ರಮದ ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿದರು.
ಉಡುಪಿಯಲ್ಲಿ ಧರ್ಮ ಸಂಸತ್ತು ನಡೆಯುವ ವೇಳೆ ನಮ್ಮ ನಿರೀಕ್ಷೆಯ ಕೆಲವು ಘೋಷಣೆಗಳು ಆಗಬೇಕು ಎನ್ನುವುದು ಎಲ್ಲರ ಆಶಯ ಎಂದು ಹೇಳಿದರು. ಪ್ರಸ್ತುತ ನಾವೆಲ್ಲರೂ ಸಂತೋಷದಿಂದ ಇದ್ದೇವೆ ಎಂದರೆ ಎಚ್ಚರದಿಂದ ಇರಬೇಕಾದ ಅವಶ್ಯಕತೆಯೂ ಇದೆ. ನಮ್ಮ ಕರ್ತವ್ಯಗಳೇನು ಎಂಬುದನ್ನು ಮನನ ಮಾಡಿಕೊಳ್ಳಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಪಣತೊಡಬೇಕು. ಹಿಂದು ಸಮಾಜ ಹೃದಯ ವೈಶಾಲ್ಯತೆಯನ್ನು ಹೊಂದಿದೆ. ಆದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ-ಚಿಕ್ಕಮಂಗಳೂರಿನ ಸಂಸದೆ ಶೋಭ ಕರಂದ್ಲಾಜೆ ಹಿಂದೆ ಜಾತಿ ಜಾತಿಗಳ ಮಧ್ಯೆ ಹೊಡೆದಾಟ, ಸಂಘರ್ಷಗಳು ನಡೆಯುವ ಸಂದರ್ಭದಲ್ಲಿ ಹಿಂದುಗಳೆಲ್ಲರೂ ಸಹೋದರರು, ಹಿಂದುಗಳೆಲ್ಲರೂ ಒಂದು ಎನ್ನುವ ಸಂದೇಶಗಳನ್ನು ಇದೇ ನೆಲದಿಂದ ಪೇಜಾವರ ಶ್ರೀಗಳು ನೀಡಿದ್ದರು. ಇದೀಗ ಎಲ್ಲೆಡೆಶಾಂತಿಯ ವಾತಾವರಣ ನಿರ್ಮಾಣವಾಗುತ್ತಿರುವ ವೇಳೆ ಎಲ್ಲರೂ ಭಾರತದ ಕಡೆಗೆ ನೋಡುತ್ತಿದ್ದಾರೆ. ವಿಛಿದ್ರಕಾರಿ ಶಕ್ತಿಗಳ ವಿರುದ್ಧ ಹಿಂದು ಸಮಾಜ ಒಂದಾಗಿ ಕಾರ್ಯನಿರ್ವಹಿಸಬೇಕಿದ್ದು, ಅದಕ್ಕಾಗಿ ಉಡುಪಿಯ ನೆಲದಿಂದ ಸ್ಪಷ್ಟ ಸಂದೇಶ ಹೋಗಬೇಕಿದೆ. ಕರಾವಳಿ ಸಹಿತ ಇಡೀ ದೇಶದಲ್ಲಿ ಲವ್ ಜಿಹಾದ್, ಸಮಾಜದ್ರೋಹಿ ಚಟುವಟಿಕೆಗಳು ನಡೆಯುತ್ತಿವೆ. ಒಗ್ಗಟ್ಟಿನಿಂದ ವಿರೋಧಿಸುವ ಮೂಲಕ ಮಾತ್ರ ಅದಕ್ಕೆ ಪರಿಹಾರ ಕಾಣಬಹುದು. ಆದ್ದರಿಂದ ಇಡೀ ದೇಶದಲ್ಲಿ ವಿಛಿದ್ರಕಾರಿ ಶಕ್ತಿಗಳ ವಿರುದ್ಧ ಈ ನೆಲದಿಂದ ಸಂದೇಶ ಹೋಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಧರ್ಮ ಸಂಸತ್ತು ಸ್ವಾಗತ ಸಮಿತಿ ಉಪಾಧ್ಯಕ್ಷ ರಮೇಶ ಬಂಗೇರ, ಆರ್ಥಿಕ ಸಮಿತಿ ಅಧ್ಯಕ್ಷ ಅಚ್ಯುತ ಕಲ್ಮಾಡಿ ಉಪಸ್ಥಿತರಿದ್ದರು.
ಧರ್ಮ ಸಂಸತ್ತು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧ್ಯಕ್ಷ ಪಿ. ವಿಲಾಸ್ ನಾಯಕ್ ಸ್ವಾಗತಿಸಿ, ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಬಜರಂಗದಳ ಮಂಗಳೂರು ವಿಭಾಗ ಸಹಸಂಚಾಲಕ ಸುನೀಲ್ ಕೆ.ಆರ್. ವಂದಿಸಿದರು.