ಅಯೋಧ್ಯೆ ತೀರ್ಪು ; ಶಾಂತಿ ಕಾಪಾಡುವಂತೆ ಉಡುಪಿ ಡಿಸಿ ಮನವಿ – ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ: ಶನಿವಾರ ಸುಪ್ರೀಂ ಕೋರ್ಟ್ ಐತಿಹಾಸಿಕ ಅಯ್ಯೋಧ್ಯೆ ತೀರ್ಪು ನೀಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮತ್ತು ಯಾರೇ ಆದರೂ ಶಾಂತಿ ಕದಡುವ ಕಾರ್ಯಕ್ಕೆ ಕೈ ಹಾಕಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ನೀಡಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಅಶಾಂತಿ ,ಗಲಭೆ ಸೃಷ್ಟಿ ಸಿದ್ರೆ ,ಸೃಷ್ಟಿ ಸುವ ಪ್ರಯತ್ನ ಮುಂದಾದ್ರೆ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದು ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಆಯಾಯ ಠಾಣಾ ವ್ಯಾಪ್ತಿಯಲ್ಲಿ ಸಾಮಾನ್ಯ ಭದ್ರತಾ ವ್ಯವಸ್ಥೆ ಇರಲಿದ್ದು ಹೆಚ್ಚುವರಿಯಾಗಿ ನಾಲ್ಕು ಕೆಎಸ್ ಆರ್ ಪಿ ತುಕುಡಿ ನಿಯೋಜನೆ ಮತ್ತು ಡಿಎಆರ್ ನ ಎಂಟು ತುಕುಡಿ ನಿಯೋಜನೆ ಮಾಡಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ, ಧಾರ್ಮಿಕ ಕೇಂದ್ರಗಳ ಆವರಣದಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ವದಂತಿ ಹಬ್ಬಿಸದಂತೆ ಸೂಚನೆಯನ್ನು ನೀಡಿದ್ದಾರೆ.