ಅರುಣ್ ಕುಮಾರ್ ಪುತ್ತಿಲ ಜತೆಗಿನ ಸಂಧಾನ ಯಶಸ್ವಿ, ಹಿಂದೂ ಮುಖಂಡ ನಾಳೆ ಬಿಜೆಪಿ ಸೇರ್ಪಡೆ
ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಜತೆಗಿನ ಬಿಜೆಪಿ ನಾಯಕರ ಸಂಧಾನ ಯಶಸ್ವಿಯಾಗಿದೆ. ಇಂದು(ಮಾರ್ಚ್ 14) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಂಧಾನ ಸಭೆ ನಡೆದಿದ್ದು, ಅರುಣ್ ಪುತ್ತಿಲ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ನಾಯಕರು ಕೊನೆಗೂ ಯಶಸ್ವಿಯಾಗಿದ್ದು, ನಾಳೆ (ಮಾರ್ಚ್ 15) ಅರುಣ್ ಪುತ್ತಿಲ ಅವರು ಮಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಆನೆ ಬಲಬಂದಂತಾಗಿದೆ.
ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಪುತ್ತಿಲರ ಜೊತೆಗಿನ ಸಂಧಾನ ಯಶಸ್ವಿಯಾಗಿದ್ದು, ಇದೀಗ ಬಿಜೆಪಿಗೆ ಮರುಸೇರ್ಪಡೆಯಾಗಲು ಪುತ್ತಿಲ ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ ಕಳೆದ ವಿಧಾನಸಭಾ ಚುನಾವಣೆಯಿಂದ ಆರಂಭಗೊಂಡಿದ್ದ ಬಿಜೆಪಿ-ಪುತ್ತಿಲರ ನಡುವಿನ ಸಂಘರ್ಷ ಅಂತ್ಯವಾದಂತಾಗಿದೆ.
ಇನ್ನು ಪ್ರಮುಖವಾಗಿ ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕೆಲ ನಾಯಕರ ನಡೆಗೆ ಅಸಮಾಧಾನಗೊಂಡಿದ್ದ ಪುತ್ತಿಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಪಕ್ಷೇತರವಾಗಿ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲೂ ಸಹ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದ್ರೆ, ಇದೀಗ ನಳಿನ್ ಕುಮಾರ್ ಕಟೀಲ್ ಬದಲಿಗೆ ಕ್ಯಾ.ಬ್ರಿಜೇಶ್ ಚೌಟಾಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದರಿಂದ ಪುತ್ತಿಲ ಸೈಲೆಂಟ್ ಆಗಿದ್ದರು. ಅಲ್ಲದೇ ಕ್ಯಾ.ಬ್ರಿಜೇಶ್ ಚೌಟಾ ಸೇರಿದಂತೆ ಕೆಲ ಕರಾವಳಿ ಭಾಗದ ಬಿಜೆಪಿ ನಾಯಕರು ಅರುಣ್ ಪುತ್ತಿಲ ಅವರನ್ನು ಕರೆಯಿಸಿ ಮಾತುಕತೆ ನಡೆಸಿ ಮನವೊಲಿಸಿದ್ದಾರೆ.