ಅರ್ಧಕ್ಕೆ ನಿಂತಿರುವ ಕಾಂಕ್ರೀಟೀಕರಣವನ್ನು ಪೂರ್ಣಗೊಳಿಸಲು ಒತ್ತಾಯ .. – ಡಿ.ವೈ. ಎಫ್.ಐ

Spread the love

ಅರ್ಧಕ್ಕೆ ನಿಂತಿರುವ ಕಾಂಕ್ರೀಟೀಕರಣವನ್ನು ಪೂರ್ಣಗೊಳಿಸಲು ಒತ್ತಾಯ .. – ಡಿ.ವೈ. ಎಫ್.ಐ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ಪಕ್ಕಲಡ್ಕ ಪ್ರದೇಶದ ಮುಖ್ಯರಸ್ತೆಯಲ್ಲಿ ನಗರ ಪಾಲಿಕೆ ಕೈಗೊಂಡಿರುವ ಕಾಂಕ್ರೀಟೀಕರಣ ಕೆಲಸವು ಅರ್ಧಕ್ಕೆ ನಿಂತಿದ್ದು ಇದನ್ನು ಕೂಡಲೇ ನಡೆಸಿ ಪೂರ್ಣಗೊಳಿಸಬೇಕೆಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕ ಒತ್ತಾಯಿಸಿದೆ.

ಅಳಪೆ ದಕ್ಷಿಣ ವಾರ್ಡ್ ಗೆ ಒಳಗೊಂಡಿರುವ ಪಡೀಲ್ ಬಜಾಲ್ ಮುಖ್ಯರಸ್ತೆಯ ಪಕ್ಕಲಡ್ಕದಿಂದ ಬಜಾಲ್ ಚರ್ಚ್ ವರೆಗಿನ ರಸ್ತೆ ಕಾಂಕ್ರೀಟೀಕರಣಗೊಳಿಸಲು ಕಾಮಗಾರಿ ಕೆಲಸ ಕೈಗೊಂಡು ತಿಂಗಳುಗಳು ಕಳೆದಿದೆ ಈ ವರೆಗೂ ಈ ರಸ್ತೆಯನ್ನು ಪೂರ್ಣಗೊಳಿಸಲು ಸಾದ್ಯವಾಗಿಲ್ಲ. ಕಾಮಗಾರಿ ಪ್ರಾರಂಭಗೊಂಡ ದಿನದಿಂದ ಈವರೆಗೂ ಆಮೆವೇಗದಲ್ಲಿ ಸಾಗುತ್ತಿದ್ದ ಕೆಲಸ ನಿನ್ನೆಯಿಂದ ಅದೂ ಕೂಡ ನಿಂತಿದೆ. ಕಾಮಗಾರಿ ಕೆಲಸ ಕೈಗೆತ್ತಿಕೊಂಡ ಕಂಪೆನಿ ಯಾವುದೋ ನೆಪವೊಡ್ಡಿ ತನ್ನ ಸಂಪೂರ್ಣಕೆಲಸವನ್ನು ಸ್ಥಗಿತಗೊಳಿಸಿದೆ. ಈಗಾಗಲೇ ಈ ಪ್ರದೇಶದ ನಿವಾಸಿಗಳು, ಸ್ಥಳೀಯ ಶಾಲಾ ಮಕ್ಕಳು ದಿನನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಬಸ್ ಓಡಾಟ ನಿಂತುಹೋಗಿದೆ. ಸ್ಥಳೀಯ ಜನಸಾಮಾನ್ಯರು, ವಿದ್ಯಾರ್ಥಿಗಳು ನಡೆದಾಡಲು ಕಷ್ಟಪಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಬಹಳಷ್ಟು ಬಾರಿ ಬಿದ್ದು ಗಾಯಗೊಂಡಿರುತ್ತಾರೆ. ಈ ನಿಧಾನಗತಿಯ ಕಾಮಗಾರಿ ಬಗ್ಗೆ ಹಲವಾರು ಬಾರಿ ಮನಪಾ ಆಡಳಿತದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಪ್ರತಿಭಟನೆಯ ಭಾಗವಾಗಿ ಸಾರ್ವಜನಿಕರೇ ಶ್ರಮದಾನದ ಮೂಲಕ ರಸ್ತೆ ರಿಪೇರಿ ಮಾಡಿದರೂ ಮನಪಾ ಆಡಳಿತ ಈ ಬಗ್ಗೆ ಗಮನಹರಿಸಲೇ ಇಲ್ಲ. ಈ ರಸ್ತೆಯ ಅವ್ಯವಸ್ಥೆಯಿಂದ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡಿರುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಿಂತುಹೋಗಿರುವ ಕಾಮಗಾರಿಯನ್ನು ಪ್ರಾರಂಭಿಸಿ ಆದಷ್ಟು ಬೇಗ ರಸ್ತೆ ನಿರ್ಮಾಣ ಕೆಲಸ ಪೂರ್ಣಗೊಳಿಸಿ ಕೊಡಬೇಕು ಇಲ್ಲದಿದ್ದಲ್ಲಿ ಈ ಬಗ್ಗೆ ಮುಂದಿನ ದಿನ ಪ್ರತಿಭಟನೆಯನ್ನು ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಅಧ್ಯಕ್ಷರಾದ ನೂರುದ್ದೀನ್ ಪಕ್ಕಲಡ್ಕ, ಕಾರ್ಯದರ್ಶಿ ಧಿರಾಜ್ ಬಜಾಲ್ ಜಂಟಿ  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love