ಅರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗದು: ಪದ್ಮರಾಜ್

Spread the love

ಅರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗದು: ಪದ್ಮರಾಜ್

ಮಂಗಳೂರು: ದ.ಕ. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಬಿಜೆಪಿಯವರು ವಿನಾ ಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆಯೇ ಹೊರತು, ಒಂದು ವೇಳೆ ಪಡಿತರ ಚೀಟಿಗಳ ಪರಿಷ್ಕರಣೆಯ ವೇಳೆ ಅಧಿಕಾರಿಗಳ ತಪ್ಪಿನಿಂದ ಏನೇ ಅಂತಹ ಸಮಸ್ಯೆ ಆಗಿದ್ದರೂ ಅದನ್ನು ಸರಕಾರ ಸರಿ ಮಾಡುವ ಕೆಲಸ ಮಾಡಲಿದೆ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭರವಸೆ ನೀಡಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿಗಳನ್ನು ಆರ್ಥಿಕವಾಗಿ ಹಿಂದುಳಿದ ಮಾನದಂಡದಂತೆ ನೀಡಬೇಕಾಗಿದ್ದು, ಅನರ್ಹರಿಗೆ ನೀಡಿರುವ ಕಾರ್ಡ್‌ಗಳನ್ನು ಮಾತ್ರವೇ ರದ್ದುಪಡಿಸಲಾಗುತ್ತದೆ ಎಂದರು.

ಕೇಂದ್ರ ಸರಕಾರವು 5.80 ಕೋಟಿ ಇಂತಹ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ಆದರೆ ಅದರ ಬಗ್ಗೆ ಚಕಾರವೆತ್ತದ ಬಿಜೆಪಿ ನಾಯಕರು ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರದಲ್ಲಿಯೂ ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿ ನಾಯಕರು ತಮ್ಮ 2019ರಲ್ಲಿ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವಿದ್ದಾಗ 226 ನೋಟೀಸು ನೀಡಿರುವುದನ್ನು ಮರೆತಿದೆ. ಇದು ಪ್ರಕ್ರಿಯೆಯೇ ಹೊರತು ಯಾವುದೇ ಕಾರಣಕ್ಕೂ ರೈತರು, ದೇವಸ್ಥಾನ, ಮಠ ಮಂದಿರಗಳ ಒಂದಿಂಚೂ ಜಾಗವನ್ನು ಕೂಡಾ ಸಾಕ್ಷ ಇಲ್ಲದೆ ವಕ್ಫ್‌ಗೆ ಹಸ್ತಾಂತರಿಸುವ ಕೆಲಸವನ್ನು ಸಿದ್ಧರಾಮಯ್ಯ ನೇತೃತ್ವದ ಸರಕಾರ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ ಎಂದವರು ಹೇಳಿದರು.

ಅದಾನಿ ವಿರುದ್ಧ ಅಮೆರಿಕದ ನ್ಯಾಯ ಇಲಾಖೆ ಮಾಡಿರುವ 2500 ಕೋಟಿರೂ.ಗಳ ಲಂಚ ಆರೋಪದ ರಾಷ್ಟ್ರ ಮಟ್ಟದಲ್ಲಿ ದೇಶ ತಲೆತಗ್ಗಿಸುವ ಕೆಲಸ ಮಾಡಲಾಗಿದೆ. ಇದರ ಬಗ್ಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಪದ್ಮರಾಜ್ ಆಗ್ರಹಿಸಿದರು.

ಜಿಲ್ಲೆಯ ನೂತನ ಸಂಸದ ಬ್ರಿಜೇಶ್ ಚೌಟ ಅವರು ಪರದೇಶದಲ್ಲಿರುವ ನಮ್ಮೂರಿನವರಿಂದ ಹೂಡಿಕೆ ಮಾಡಿಸುವ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ. ಚುನಾವಣಾ ಪ್ರಣಾಳಿಕೆಯಲ್ಲಿ ನನ್ನ ಭರವಸೆಗಳಲ್ಲಿ ಇದೂ ಸೇರಿದ್ದು, ನೂತನ ಸಂಸದರು ತಮ್ಮ ಹಳೆ ಚಾಳಿಯನ್ನು ಬಿಟ್ಟು ನಡೆಸುವ ಇಂತಹ ಕಾರ್ಯಗಳಿಗೆ ಪಕ್ಷಬೇಧ ಮರೆತು ಸಹಕರಿಸುತ್ತೇವೆ ಎಂದು ಪದ್ಮರಾಜ್ ಹೇಳಿದರು.

ಮನಪಾದಲ್ಲಿ ಬಿಜೆಪಿ ಆಡಳಿತದಲ್ಲಿ ಜಲಸಿರಿ ಕಾಮಗಾರಿ, ಗೇಲ್‌ಗ್ಯಾಸ್, ಸ್ಮಾರ್ಟ್ ಸಿಟಿ, ಪ್ರೀಮಿಯಂ ಎಫೇರ್‌ನ ಅವ್ಯವಸ್ಥಿತ ಕಾಮಗಾರಿಗಳಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಎನ್‌ಐಟಿಕೆಯ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಮಿತಿಯಿಂದ ವರದಿ ತರಿಸಿ ಕ್ರಮವಹಿಸಲು ಕಳೆದೆರಡು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ನಗರದ ಹಲವು ರಸ್ತೆಗಳಲ್ಲಿ ಅಗೆದು ಹಾಕಲಾಗಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಡಿಸೆಂಬರ್ ಒಳಗೆ ರಸ್ತೆಗುಂಡಿಗಳಿಗೆ ಪ್ಯಾಚ್‌ವರ್ಕ್ ಕೆಲಸ ಮುಗಿಸಬೇಕು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಸಭೆ ಕರೆಯಬೇಕು ಎಂದು ಮನಪಾ ಹಿರಿಯ ಸದಸ್ಯ ಹಾಗೂ ಮಾಜಿ ಮೇಯರ್ ಶಶಿಧರ ಹೆಗ್ಡೆ ಒತ್ತಯಿಸಿದರು.

ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಎಲ್ಲಾ ಚುನಾವಣೋತ್ತರ ಫಲಿತಾಂಶಗಳನ್ನು ಮೀರಿ ಬಂದಿದೆ. ಈ ಮೂಲಕ ಜನತೆ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಅಭಿವೃದ್ಧಿ ಪೂರಕ ಕೆಲಸಕ್ಕೆ ಬೆಂಬಲ ನೀಡಿದಂತಾಗಿದೆ. ಜಾರ್ಕಂಡ್‌ನಲ್ಲಿಯೂ ಸಮೀಕ್ಷೆಯನ್ನು ಮೀರಿ ಕಾಂಗ್ರೆಸ್‌ಗೆ ಗೆಲುವು ದೊರಕಿದೆ. ಮಹಾರಾಷ್ಟ್ರದ ಕಾಂಗ್ರೆಸ್ ಸೋಲನ್ನು ನಾವು ಸ್ವೀಕರಿಸುತ್ತೇವೆ. ಆದರೆ, ಮೀರಾ ಭವರ್ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿದ್ದ ಸಂದರ್ಭ ಅಲ್ಲಿನ ಬೂತ್ ಒಂದರಲ್ಲಿ ನಡೆದ ಚುನಾವಣಾ ಅಕ್ರಮದ ವೇಳೆ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅದರಂತೆ ಮೂರ ಜನ ಅಧಿಕಾರಿಗಳನ್ನು ಅಮಾನತುಗೊಳಿಸುವ ಕಾರ್ಯ ನಡೆದಿತ್ತು. ಅದಾನಿಯವರೇ ಅಲ್ಲಿ ಚುನಾವಣೆ ನಡೆಸುತ್ತಿರುವ ಮಾತು ಕೇಳಿ ಬಂದಿತ್ತು. ಹಾಗಿದ್ದರೂ ಸೋಲನ್ನು ಒಪ್ಪಿಕೊಳ್ಳುವ ಜತೆಗೆ ದೇಶದ ಸಂವಿಧಾನ ವಿರದ್ದುವಾಗಿ ಕೆಲಸ ಮಾಡುವವರ ವಿರುದ್ಧ ಎಚ್ಚರಿಸುವ ಕೆಲಸವನ್ನು ಕಾಂಗ್ರೆಸ್ ಮುಂದುವರಿಸಲಿದೆ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಬ್ಬೀರ್, ಹೇಮಂತ್ ಗರೋಡಿ, ಸಲೀಂ, ದುರ್ಗಾ ಪ್ರಸಾದ್, ಇಮ್ರಾನ್, ಹಬೀಬ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.


Spread the love