ಅಲೆಗಳ ಅಬ್ಬರಕ್ಕೆ ಟೂರಿಸ್ಟ್ ಬೋಟ್ ಪಲ್ಟಿ: ನಾಪತ್ತೆಯಾಗಿದ್ದ ರೈಡರ್ ಮೃತದೇಹ ಪತ್ತೆ
ಕುಂದಾಪುರ: ತ್ರಾಸಿ ಅರಬ್ಬಿ ಸಮುದ್ರದಲ್ಲಿ ಶನಿವಾರ ಸಂಜೆ ಅಲೆಗಳ ಅಬ್ಬರಕ್ಕೆ ಟೂರಿಸ್ಟ್ ಬೋಟ್ ಪಲ್ಟಿಯಾಗಿ ನಾಪತ್ತೆಯಾಗಿದ್ದ ಬೋಟ್ ರೈಡರ್ ಮೃತದೇಹ ಸೋಮವಾರ ನಸುಕಿನ ಜಾವ ತ್ರಾಸಿ ಸಮೀಪದ ಹೊಸಪೇಟೆ ಕಡಲತೀರದಲ್ಲಿ ಪತ್ತೆಯಾಗಿದೆ.
ಬೋಟ್ ರೈಡ್ ನಡೆಸುತ್ತಿದ್ದ ರೈಡರ್ ಪ್ರಸ್ತುತ ತ್ರಾಸಿಯಲ್ಲಿ ನೆಲೆಸಿದ್ದು, ಮೂಲತಃ ಕಾರವಾರ ಜಿಲ್ಲೆಯ ಮುರ್ಡೇಶ್ವರದ ರೋಹಿದಾಸ್ ಅಲಿಯಾಸ್ ರವಿ (41) ಮೃತ ದುರ್ದೈವಿ.
ತ್ರಾಸಿ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದ ಅನುಗ್ರಹ ಬಾರ್ ಸಮೀಪ ಅರಬ್ಬಿ ಸಮುದ್ರದ ಕಡಲ ಕಿನಾರೆಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸಮುದ್ರದ ಮೋಜನ್ನು ತೋರಿಸಲು ಖಾಸಗಿ ಟೂರಿಸ್ಟ್ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರಶಾಂತ್ (25 ) ಎನ್ನುವ ಪ್ರವಾಸಿಗ ಟೂರಿಸ್ಟ್ ಬೋಟಿನಲ್ಲಿ ಬೋಟಿಂಗ್ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬಂದ ಭಾರಿ ಗಾತ್ರದ ಅಲೆಯಲ್ಲಿ ಬೋಟ್ ಆಯಾ ತಪ್ಪಿ ಪಲ್ಟಿ ಆಗಿತ್ತು. ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದಿದ್ದರು. ಘಟನೆ ವೇಳೆ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದು, ಜಾಕೆಟ್ ಧರಿಸಿದ ರೈಡರ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ನಾಪತ್ತೆಯಾದ ರೋಹಿದಾಸ್ ಅವರ ಪತ್ತೆಗಾಗಿ ಸತತ ಶೋಧ ಕಾರ್ಯ ನಡೆಸಲಾಗಿತ್ತು. ಶನಿವಾರ ಸಂಜೆ ಹಾಗೂ ಭಾನುವಾರ ದಿನವಿಡೀ ಗಂಗೊಳ್ಳಿ ಪೊಲೀಸ್ ಠಾಣೆ, ಕರಾವಳಿ ಪೊಲೀಸ್ ಕಾವಲು ಪಡೆಯ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು, ಈಜುಪಟು ದಿನೇಶ್ ಖಾರ್ವಿ ನೇತೃತ್ವದ ತಂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದು, ಸೋಮವಾರ ಮುಂಜಾನೆ ಕಾರ್ಯಾಚರಣೆಗಿಳಿದ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದೆ.
ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.