ಅಲೋಶಿಯಸ್ ವಿವಿಯ ಪ್ರಥಮ ಕುಲಪತಿಯಾಗಿ ಡಾ. ಪ್ರವೀಣ್ ಮಾರ್ಟಿಸ್ ನೇಮಕ
ಮಂಗಳೂರು: ಯುಜಿಸಿಯಿಂದ ಇತ್ತೀಚೆಗೆ ಪರಿಗಣಿತ ವಿಶ್ವವಿದ್ಯಾನಿಲಯವಾಗಿ ಮಾನ್ಯತೆ ಪಡೆದಿರುವ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಅವರು ಪ್ರಥಮ ಕುಲಪತಿಯಾಗಿ ನೇಮಕಗೊಂಡಿದ್ದಾರೆ ಎಂದು ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರೊವಿನ್ಸಿಯಲ್ ಹಾಗೂ ಕುಲಾಧಿಪತಿ ರೆ.ಫಾ. ಡಯನೀಶಿಯಸ್ ವಾಜ್ ಅವರು ಘೋಷಿಸಿದ್ದಾರೆ.
ಉಡುಪಿಯ ಶಂಕರ ಪುರದವರಾದ ಡಾ. ಪ್ರವೀಣ್ ಮಾರ್ಟಿಸ್, ಶಂಕಪುರದ ಸಂತ ಜಾನ್ಸ್ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು, ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಲ್ಜಿಯಂನ ನೆಮ್ಯೂರ್ ವಿವಿಯಿಂದ ನ್ಯಾನೋಸಾಯನ್ಸ್‌ನಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.
ಡಾ. ಪ್ರವೀಣ್ ಮಾರ್ಟಿಸ್ ಅವರು ಬೆಂಗಳೂರಿನ ಸಂತ ಜೋಸೆಫ್ಸ್ ಸಂಧ್ಯಾ ಕಾಲೇಜಿನಲ್ಲಿ ಕರೆಸ್ಪಾಂಡೆಂಟ್ ಮತ್ತು ವಿದ್ಯಾರ್ಥಿ ಸಲಹೆಗಾರರಾಗಿ, ಸಂತ ಜೋಸೆಫ್ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ, ಸಂತ ಜೋಸೆಫ್ಸ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯ ನಿರ್ದೇಶಕರಾಗಿ, ಕಾಲೇಜಿನ ರೆಕ್ಟರ್ ಮತ್ತು ಪ್ರಾಂಶುಪಾಲರಾಗಿ, ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಡಿಡಿಯು ಕೌಶಲ್ ಕೇಂದ್ರದ ನಿರ್ದೇಶಕರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ ಸಂಶೋಧನಾ ಪ್ರಬಂಧ ಪ್ರಕಟಿಸಿರುವ ಇವರು, ಭಾರತದಲ್ಲಿನ ಸ್ವಾಯತ್ತ ಕಾಲೇಜುಗಳ ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಕೌನ್ಸಿಲ್‌ನಿಂದ ಅನುಮೋದಿತ ಮೌಲ್ಯಮಾಪಕರಾಗಿದ್ದಾರೆ ಎಂದು ಸಂತ ಅಲೋಶಿಯಸ್ ವಿವಿ ಪ್ರಕಟನೆ ತಿಳಿಸಿದೆ.