ಅ. 4 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರು ಭೇಟಿ
ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅ.2ರಿಂದ 4ರ ವರೆಗೆ ಮಂಗಳೂರು ಹಾಗೂ ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
ಅ.3ರಂದು ಕೇರಳದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ರಾತ್ರಿ ಮಂಗಳೂರಿಗೆ ಮರಳಲಿದ್ದಾರೆ. ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯವಿದ್ದು, ಅ.4ರಂದು ಬೆಳಗ್ಗೆ 10 ಗಂಟೆಗೆ ನಗರದ ಓಶಿಯನ್ ಪರ್ಲ್ ಹೋಟೆಲ್ನಲ್ಲಿ ರಾಜ್ಯದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ ಐದು ಗಂಟೆಗೆ ಜಿಲ್ಲೆಯ ಪ್ರಮುಖರ ಸಭೆ ನಗರದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದ್ದು, ಇದರಲ್ಲಿ ವೈದ್ಯರು, ವಕೀಲರು, ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಅವಧಿಯಲ್ಲಿ ಡಾ.ಟಿಎಂಎ ಪೈ ಸಭಾಂಗಣದ ಇನ್ನೊಂದು ಹಾಲ್ನಲ್ಲಿ ಆಯ್ದ ಕಾರ್ಯಕರ್ತರ ಸಭೆಯೂ ನಡೆಯಲಿದೆ.
ನಗರದಲ್ಲಿ ನಡೆಯಲಿರುವ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ನಡೆದ ಅಹಿತಕರ ಘಟನೆಗಳಲ್ಲಿ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳ ಕುರಿತಂತೆ ಚರ್ಚೆ ಹಾಗೂ ಕಾರ್ಯರ್ಕತರಿಗೆ ಪ್ರೇರಣೆ ನೀಡುವ ಕಾರ್ಯ ಅಮಿತ್ ಶಾ ಅವರಿಂದ ನಡೆಯಲಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಪುತ್ತೂರಿನ ಪಡುಮಲೆಯಲ್ಲಿ ದೇಯಿಬೈದೆತಿಗೆ ನಡೆದ ಅವಮಾನ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯಿಂದ ಆಯೋಜಿಸಿದ್ದ ಪಾದಯಾತ್ರೆಯನ್ನು ರಾಷ್ಟ್ರೀಯ ಅಧ್ಯಕ್ಷರ ಆಗಮನ ಹಿನ್ನೆಲೆಯಲ್ಲಿ ಅ.10ರಂದು ಬೆಳಗ್ಗೆ ೧೦ಕ್ಕೆ ಮುಂದೂಡಲಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಳ ಗದ್ದೆಯಿಂದ ದೇಯಿಬೈದೆತಿ ಕ್ಷೇತ್ರ ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಸಂಜೀವ ಮಠಂದೂರು ತಿಳಿಸಿದರು.