ಅ.6ರಂದು ಹಿಂದು ಸ್ವಾಯತ್ತ ಮಂಡಳಿ ರಚನೆಗೆ ಸೌತಡ್ಕದಲ್ಲಿ ಉಪವಾಸ ಸತ್ಯಾಗ್ರಹ
ಮಂಗಳೂರು: ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಚುನಾಯಿತ ಸರ್ಕಾರ ವ್ಯಾಪಾರಿ ಕೇಂದ್ರಗಳಂತೆ ನಡೆಸುತ್ತಿರುವುದು ಹಿಂದುಗಳ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಹಿಂದುಗಳ ದೇವಾಲಯಗಳು ಮತ್ತು ಅದರ ಸೊತ್ತುಗಳು ಜಾತ್ಯತೀತ ಸರ್ಕಾರದ ಕಪಿಮುಷ್ಠಿಯಲ್ಲಿದ್ದು ಹಿಂದುಗಳ ಧಾರ್ಮಿಕ ಚಟುವಟಿಕೆಗೆ ಅಡ್ಡಿಯಾಗಿದೆ.
ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಚುನಾಯಿತ ಸರ್ಕಾರ ವ್ಯಾಪಾರಿ ಕೇಂದ್ರಗಳಂತೆ ನಡೆಸುತ್ತಿರುವುದು ಹಿಂದುಗಳ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಹಿಂದುಗಳ ದೇವಾಲಯಗಳು ಮತ್ತು ಅದರ ಸೊತ್ತುಗಳು ಜಾತ್ಯತೀತ ಸರ್ಕಾರದ ಕಪಿಮುಷ್ಠಿಯಲ್ಲಿದ್ದು ಹಿಂದುಗಳ ಧಾರ್ಮಿಕ ಚಟುವಟಿಕೆಗೆ ಅಡ್ಡಿಯಾಗಿದೆ. ಹೀಗಾಗಿ ಹಿಂದು ದೇಗುಲಗಳನ್ನು ಹಿಂದುಗಳಿಗೇ ಬಿಟ್ಟು ಕೊಡಬೇಕೆಂದು ಸೌತಡ್ಕ ಗಣಪತಿ ಕ್ಷೇತ್ರದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಪುತ್ತೂರು ಪ್ರಖಂಡ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಹೇಳಿದ್ದಾರೆ.
ಪುರಾತನ ಕಾಲದಿಂದಲೂ ಭಾರತವು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಹಿಂದು ಧಾರ್ಮಿಕ ಕೇಂದ್ರಗಳು ಸರಕಾರದ ಅಧೀನಕ್ಕೆ ಒಳಪಟ್ಟವು. ಸರಕಾರವು ಸರ್ವ ಜನಾಂಗದ, ಜಾತಿ- ಧರ್ಮದ ಒಳಗೊಳ್ಳುವಿಕೆಯಿಂದ ಆಯ್ಕೆಗೊಳಿಸಿದ ಸಂಸ್ಥೆಯಾಗಿದೆ. ಹೀಗಾಗಿ ಹಿಂದು ಧಾರ್ಮಿಕ ದತ್ತಿ ಕಾಯಿದೆಯಿಂದ ಎ, ಬಿ ಮತ್ತು ಸಿ ಗ್ರೇಡ್ ದೇವಾಲಯಗಳನ್ನು ಮುಕ್ತಗೊಳಿಸಿ ಹಿಂದು ಸ್ವಾಯತ್ತ ಮಂಡಳಿಗಳನ್ನು ರಚಿಸುವುದಕ್ಕೆ ಒತ್ತಾಯಿಸಿ ಸೌತಡ್ಕ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಅ.6ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ಇದರಂತೆ, ಭಾನುವಾರ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದ್ದು, ನಾಡಿನ ಸ್ವಾಮೀಜಿಗಳು, ನಾಡಿನ ಮಠ, ಮಂದಿರಗಳ ಪ್ರಮುಖರು, ದೇವಾಲಯಗಳ ವಿಶ್ವಸ್ತರು, ಹಿಂದು ಸಮಾಜದ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಮುಂದೆ ರಾಜ್ಯಾದ್ಯಂತ ಈ ರೀತಿಯ ಉಪವಾಸ ಸತ್ಯಾಗ್ರಹ ನಡೆಯಲಿದ್ದು, ಅದಕ್ಕಿದು ನಾಂದಿ ಹಾಡಲಿದೆ ಎಂದು ಪ್ರಸನ್ನ ಹೇಳಿದ್ದಾರೆ.
ತಿರುಪತಿ ಲಡ್ಡು ಪ್ರಕರಣ ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳು, ನಾಸ್ತಿಕ ಆಡಳಿತಗಾರರ ಕಾರಣದಿಂದ ಆಗಿದೆ. ಲಡ್ಡಿಗೆ ಬಳಸುವ ತುಪ್ಪವನ್ನು ಕಡಿಮೆ ದರ್ಜೆಯದ್ದೂ ಬಳಸಬಹುದು ಅನ್ನುವ ನಿರ್ಧಾರಕ್ಕೆ ಬಂದಿದ್ದರಿಂದ ಎಡವಟ್ಟು ಆಗಿದೆ. ದೇವಸ್ಥಾನದ ಹಣಕ್ಕಾಗಿ ದನದ ಕೊಬ್ಬು, ಹಂದಿ ಕೊಬ್ಬು ಬಳಸುವಂಥ ಹೇಯ ಕೃತ್ಯಕ್ಕೂ ಮುಂದಾಗಿದ್ದಾರೆ. ಈ ರೀತಿಯ ಕೃತ್ಯದಿಂದಾಗಿ ಇಡೀ ಹಿಂದು ಸಮಾಜಕ್ಕೆ ಅವಮಾನ ಆಗಿದೆ ಎಂದವರು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಶಿವಾನಂದ ಮೆಂಡನ್, ಡಾ.ಎಂ.ಎಂ. ದಯಾಕರ್, ನವೀನ್ ನೆರಿಯ ಇದ್ದರು.