ಆಕಾಶವಾಣಿ ಮಂಗಳೂರು ಕೇಂದ್ರದ ‘ಆಟಿದೊಂಜಿ ದಿನ’
ಮಂಗಳೂರು: ಸ್ಥಳೀಯ ಸಂಪ್ರದಾಯ, ಸಂಸ್ಕøತಿ, ಪರಂಪರೆ, ಆಹಾರ, ಉಡುಗೆ-ತೊಡುಗೆ ಮುಂತಾದ ವಿಷಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವದು ತುಂಬಾ ಸಂತಸ ಎಂದು ಆಯುರ್ವೇದ ವೈದ್ಯೆ ಡಾ. ಅನಸೂಯಾ ದೇವಿ ತಿಳಿಸಿದರು. ನಿನ್ನೆ ಆಕಾಶವಾಣಿ ಮಂಗಳೂರು ಕೇಂದ್ರದ ಮನರಂಜನಾ ಸಂಘವು ಆಯೋಜಿಸಿದ್ದ ‘ಆಟಿದೊಂಜಿ ದಿನ” ಸಾಂಸ್ಕøತಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಎಲ್ಲರೂ ಸೇರಿ ಅಡುಗೆ ತಯಾರಿಸಿ, ಒಟ್ಟಾಗಿ ಭೋಜನವನ್ನು ಸವಿಯುವದು ಸಿಬ್ಬಂದಿಗಳ ನಡುವಿನ ಸೌಹಾರ್ದತೆಯನ್ನು ಬಿಂಬಿಸುತ್ತದೆ ಎಂದು ನುಡಿದರು.
ಆಷಾಢ ಕಾಲದಲ್ಲಿ ಸಮಾಧಾನ, ಧೈರ್ಯ ಹಾಗೂ ಮನೋರಂಜನೆ ನೀಡುವ ಒಬ್ಬ ಜಾನಪದ ಮಾಂತ್ರಿಕನ ಪರಿಕಲ್ಪನೆಯ ಪ್ರಮುಖ ಆಚರಣೆಯಾಗಿದೆ. ಆಟಿಕಳಂಜ, ಜನಸಾಮಾನ್ಯರಿಗೆ, ದನ-ಕರುಗಳಿಗೆ, ಬೆಳೆಗಳಿಗೆ, ಬರುವ ಮಾರಿಯನ್ನು ನೀಗಲು ದೇವರು ಕಳುಹಿಸುವ ಒಂದು ದೈವಿಕ ಶಕ್ತಿ. ಆಟಿ ಕಳಂಜ ಎಂಬುದು ತುಳುನಾಡಿನ ಜನತೆಯ ನಂಬಿಕೆ. ಮನೆಮನೆಗೂ ಬರುವ ಆಟಿ ಕಳಂಜ ಅರಿಶಿಣ, ಉಪ್ಪು ಮಸಿಗಳನ್ನು ಮಂತ್ರಿಸಿ ಅಂಗಳದ ನಾಲ್ಕು ಬದಿಗಳಿಗೂ ಬಿಸಾಡಿ ಮಾರಿ ಕಳೆದು ಜನರಿಗೆ ಸಾಂತ್ವನ ನೀಡುವ ಹಬ್ಬವಾಗಿದೆ. ಆಟಿ ತಿಂಗಳ ಕಷ್ಟ ಕೋಟಲೆಗಳನ್ನು ಹೇಳುವುದರ ಜತೆಗೆ ಜನರಲ್ಲಿ ಅವುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಹುಟ್ಟಿಸುವ ಪ್ರಯತ್ನದ ಈ ಆಟಿಕಳಂಜನ ಕುಣಿತವನ್ನು ನೋಡಿಕೊಂಡು ಜನ ತಮ್ಮ ದುಸ್ಥಿತಿಯನ್ನು ಮರೆಯುತ್ತಾರೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತಕುಮಾರ ಪೆರ್ಲ ನುಡಿದರು.
ಮನರಂಜನಾ ಸಂಘವು, ಕಳೆದ ಮೂರು ವರುಷಗಳಿಂದ ನಿರಂತರವಾಗಿ ಆಟಿ ಕುರಿತ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವದು, ತುಂಬಾ ಸಂತಸ ಎಂದು ಸಂಘದ ಅಧ್ಯಕ್ಷರು ಹಾಗೂ ನಿಲಯದ ಮುಖ್ಯಸ್ಥರಾದ ಜಿ. ರಮೇಶ್‍ಚಂದ್ರನ್ ಅವರು ತಿಳಿಸಿದರು.
ಮಕ್ಕಳಿಗೆ ಆಟಿ ಆಚರಣೆಯ ತಿರುಳು ತಿಳಿಸಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಆಟಿಯ ಮಹತ್ವ ಗೊತ್ತಾಗುವುದಿಲ್ಲ ಎಂದು ಸಂಘದ ಕಾರ್ಯದಶಿ ಕೆ.ಅಶೋಕ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ತಿಳಿಸಿದರು. ಉಪಕಾರ್ಯದರ್ಶಿ ಡಾ. ಸದಾನಂದ ಪೆರ್ಲ ಎಲ್ಲರನ್ನು ಸ್ವಾಗತಿಸಿದರು. ಪಿ. ಎಸ್. ಸೂರ್ಯನಾರಾಯಣ ಭಟ್ ಅವರು ವಂದನಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯವಾಗಿ ಲಬ್ಯವಿರುವ ತರಕಾರಿಗಳನ್ನು ಬಳಸಿಕೊಂಡು ಕರಾವಳಿಯ ಅಡುಗೆಯನ್ನು ಸಿಬ್ಬಂದಿಯವರೇ ತಯಾರಿಸಿದರು. ಪತ್ರೋಡೆ, ಇಂಜಿ, ಚಗಚೆ ಸೊಪ್ಪಿನ ಬಜ್ಜಿ, ಒಂದೆಲಗ ಚಟ್ಣಿ, ಕಣಿಲೆ ಉಪ್ಪಿನಕಾಯಿ, ಮಿಡಿಮಾವಿನ ಉಪ್ಪಿನಕಾಯಿ, ಪೆರಟಿ ಪಾಯಸ(ಪೆರಟಿ ಎಂದರೆ ಹಲಸಿನ ಹಣ್ಣನ್ನು ಕಾಯಿಸಿ ಸಾಂದ್ರಗೊಳಿಸಿ ಮಳೆಗಾಲಕ್ಕೆ ಶೇಖರಿಸಿಡುವದು ಎಂದರ್ಥ), ಹಲಸಿನ ಪಲ್ಯ, ಕುಸುಬಲಕ್ಕಿ ಅನ್ನ, ಹಲಸಿನ ಕಾಯಿ ಹಪ್ಪಳ, ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆ ಪಲ್ಯ, ನೀರ್ ದೋಸೆ, ದೀವಿಹಲಸಿನ ಪೋಡಿ, ಮಸಾಲೆ ಮಜ್ಜಿಗೆ, ಮೊಸರು, ತಜಂಕ ಪಲ್ಯ, ತೇಟ್ಲ ಪದೆಂಗಿ ಹೀಗೆ ದೇಸಿ ಅಡುಗೆಯನ್ನೇ ಮಾಡಲಾಗಿತ್ತು. ದೇಶಿ ಅಡಿಕೆ ಹಾಳೆಯ ತಟ್ಟೆಯಲ್ಲಿ ಊಟ ಮಾಡಲಾಯಿತು.