ಆಡದೆ ಸಾಲ ಮನ್ನಾ ಸಿದ್ದರಾಮಯ್ಯ ಉತ್ತಮ; ಭರವಸೆ ನೀಡಿ ಮೋಸ ಮಾಡಿದ ಮೋದಿ ಅಧಮ – ವಿಷ್ಣುನಾಥ್
ಉಡುಪಿ: ಆಡದೆ ಮಾಡುವವ ರೂಢಿಯೊಳಗೆ ಉತ್ತಮ, ಆಡಿ ಮಾಡುವವ ಮಧ್ಯಮ, ಆಡಿಯೂ ಮಾಡದವ ಅಧಮ ಎಂಬ ಕವಿ ವಾಣಿಯಂತೆ ಭರವಸೆ ನೀಡಿ ಕಾರ್ಯರೂಪಕ್ಕೆ ತರದ ಮೋದಿಯವರು ಅಧಮರಾಗಿದ್ದು, ಆಡದೆ ರೈತರ ಸಾಲ ಮನ್ನಾ ಮಾಡಿದ ಸಿಎಂ ಸಿದ್ದರಾಮಯ್ಯ ಉತ್ತಮರಾಗಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಹೇಳಿದರು.
ಅವರು ಭಾನುವಾರ ಉಡುಪಿ ಬ್ಲಾಕ್ ಕಾಂಗ್ರೆಸ್ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ಉಡುಪಿ ವಿಧಾನಸಭಾ ಕ್ಷೇತ್ರದ ಬೂತ್ ಸಮಿತಿಯ ಅಧ್ಯಕ್ಷರು, ಪಧಾದಿಕಾರಿಗಳು, ಸಂಸ್ಥೆಯ ಚುನಾಯಿತ ಜನಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಡೀ ದೇಶಕ್ಕೆ ಮಾದರಿಯಾಗಿದದು, ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಪೊರೈಸಿದ್ದಾರೆ. ಸಿದ್ದರಾಮಯ್ಯನವರ ಜನಪಯೋಗಿ ಕಾರ್ಯಕ್ರಮಗಳನ್ನು ಪಕ್ಷವನ್ನು ಮತ್ತಷ್ಟು ಬಲಗೊಳಿಸುವಲ್ಲಿ ಸಹಕಾರಿಯಾಗಿದ್ದು ಉತ್ತಮವಾದ ಸರಕಾರ ನೀಡುವಲ್ಲಿ ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷದ ಮನೆ ಮನಗೆ ಕಾಂಗ್ರೆಸ್ ಕಾರ್ಯಕ್ರಮ ಸರಕಾರದ ಯೋಜನೆಗಳ ಮಾಹಿತಿಯನ್ನು ಹಾಗೂ ಮೋದಿ ಸರಕಾರದ ವೈಫಲ್ಯವನ್ನು ಜನರಲ್ಲಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ. ಹಿಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ 11 ಬಿಜೆಪಿ ಸಚಿವರು ಜೈಲಿಗೆ ಹೋಗಿದ್ದರ ಜೊತೆಗೆ ಸ್ವತಃ ಯಡ್ಯೂರಪ್ಪನವರೇ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿದ್ದಾರೆ ಇದು ನಾಚಿಕೇಗೇಡು. ಸಾಲ ಮನ್ನಾ ವಿಚಾರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆ ಹೋದರೂ ಸಹ ಮುಖ್ಯಮಂತ್ರಿಗಳು ಸಹಕಾರಿ ಸಂಸ್ಥೆಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವ ಧೈರ್ಯ ತೋರಿದ್ದಾರೆ.
ಚುನಾವಣೆ ದೃಷ್ಟಿಯಿಂದ ಬೂತ್ ಮಟ್ಟದ ಕಮಿಟಿಗಳನ್ನು ಬಲಪಡಿಸುವ ಕಾರ್ಯ ಮಾಡಲಾಗುತ್ತಿದ್ದು, 40 ವಿಧಾನ ಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮನೆಮನೆಗೆ ಕಾಂಗ್ರೆಸ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಸಂಸದ ಎಂ. ವೀರಪ್ಪ ಮೊಯ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಯಾವುದೇ ಆಡಳಿತ ವಿರೋದಿ ಅಲೆ ಇಲ್ಲ. ಹೀಗಾಗಿ ಸಮಸ್ಯೆ ಹುಟ್ಟುಹಾಕುವ ಬಿಜೆಪಿ ಅದಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಅದು ಎಂದಿಗೂ ನನಸಾಗದು ಎಂದು ಹೇಳಿದರು. ರಾಜ್ಯದ ಬಡವರ ಹಸಿವು ನೀಗಿಸುವ ಕಾರ್ಯವನ್ನು ಸಿಎಂ ಮಾಡುತ್ತಿದ್ದಾರೆ. ಪಡಿತರ ಸರಬರಾಜಿನಲ್ಲಿ ಭ್ರಷ್ಟಾಚಾರ ತಡೆಗಟ್ಟಲಾಗಿದೆ. ಆದರೆ ಹಿಂದಿ ಬಿಜೆಪಿ ಆಡಳಿತ ಭ್ರಷ್ಟಾಚಾರದಿಂದಾಗಿ ಮುಖ್ಯಮಂತ್ರಿಯೇ ಜೈಲಿಗೆ ತೆರವುವಂತಾಗಿತ್ತು ಎಂದರು.
ಕೇಂದ್ರ ಸರಕಾರದ ನೋಟ್ ಬಂದ್ನಿಂದಾಗಿ ಜಿಡಿಪಿಯಲ್ಲಿ ಭಾರೀ ಇಳಿಕೆಯಾಗಿದೆ. ಬ್ಯಾಂಕ್ಗಳು ನಷ್ಟದಲ್ಲಿವೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಆದರೆ ವಾಸ್ತವದ ಅರಿವಿಲ್ಲದ ಮೋದಿಯವರು ಕೇವಲ ಭಾಷಣ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸಭಾ ಸದಸ್ಯ ಆಸ್ಕರ್ ಪೆರ್ನಾಂಡಿಸ್ ಮಾತನಾಡಿ, ಕಾಂಗ್ರೆಸ್ ನೆಟ್ಟ ಗಿಡಗಳು ಇಂದು ಹೆಮ್ಮರವಾಗಿ ಹಣ್ಣು ನೀಡುತ್ತಿದೆ. ನೆಹರೂ ಅವರು ಯೋಜನಾಬದ್ಧವಾಗಿ ಜಗತ್ತಿನ ಶ್ರೇಷ್ಠ ಸಂಸ್ಥೆಗಳಾದ ಐಐಟಿ, ಐಐಎಂ, ಏಮ್ಸ್ ಪ್ರಾರಂಭವಾಗಲು ಕಾರಣ ಕರ್ತರಾಗಿದ್ದಾರೆ. ಹೀಗಾಗಿ ಭಾರತ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತದ ಹೇಳಿಕೆ ನೀಡುತ್ತಿದ್ದು, ಕಾಂಗ್ರೆಸ್ ಮಾತ್ರ ಹಸಿವು ಮುಕ್ತ ಭಾರತಕ್ಕೆ ಕರೆ ನೀಡುತ್ತಿದೆ ಎಂದು ಹೇಳಿದರು.
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, 209 ಬೂತ್ ಮಟ್ಟದಲ್ಲಿ 2 ಸಭೆಗಳಂತೆ 418 ಸಭೆ ನಡೆಸಲು ನಿರ್ಧರಿಸಲಾಗಿದ್ದು, 139 ಸಭೆಗಳು ಪೂರ್ಣಗೊಂಡಿವೆ. ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ 65 ಜನಸಂಪರ್ಕ ಸಭೆಗಳಲ್ಲಿ 59 ಸಭೆ ಯಶಸ್ವಿಯಾಗಿ ನಡೆಸಲಾಗಿದೆ. 209 ಬೂತ್ಗಳಲ್ಲಿ 20 ಸಾವಿರ ಕಾರ್ಯಕರ್ತರ ಹಾಗೂ 5 ಜನ ಸ್ವಯಂಸೇವಕರ ದಂಡಿನೊಂದಿಗೆ ಮುಂದಿನ ವಿಧಾನ ಸಭಾ ಚುನಾವಣೆ ಎದುರಿಸಲಾಗುವುದು ಎಂದರು.
ಸಭೆಯಲ್ಲಿ ಶನಿವಾರ ನಿಧನರಾದ ಜಿಪಂ ಮಾಜಿ ಉಪಾಧ್ಯಕ್ಷ ಎಚ್. ಪ್ರಸನ್ನ ಬಲ್ಲಾಳ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಶಾಸಕ ಗೋಪಾಲ ಭಂಡಾರಿ, ಕಾಂಗ್ರೆಸ್ ಕಾರ್ಯದರ್ಶಿ ಎಂ.ಎ. ಬಾವಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಪೂರ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೊನಿಕಾ ಕರ್ನೇಲಿಯೋ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ನಾಯಕರಾದ ಅಮೃತ್ ಶೆಣೈ, ಪ್ರಶಾಂತ್ ಪೂಜಾರಿ, ಚಂದ್ರಿಕಾ ಶೆಟ್ಟಿ, ನವೀನ್ ಡಿಸೋಜಾ, ಕಿಶನ್ ಹೆಗ್ಡೆ ಕೊಲ್ಕೆಬೈಲ್, ಕ್ರಿಸ್ಟನ್ ಡಿ’ಆಲ್ಮೇಡಾ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿದರು. ಬ್ರಹ್ಮಾವರ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಗರಸಭಾ ಸದಸ್ಯ ಜನಾರ್ದನ ಭಂಡಾರ್ಕರ್ ವಂದಿಸಿದರು.