“ಆಧುನಿಕ ಕವಿತೆಗಳು ಸಮಾಜಮುಖಿ” ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

Spread the love

“ಆಧುನಿಕ ಕವಿತೆಗಳು ಸಮಾಜಮುಖಿ” ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ- ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ “ಸಾಂಜ್ ಕೊಂಕಣಿ” ಕಾರ್ಯಕ್ರಮದ ಎರಡನೇ ಭಾಗವಾಗಿ “ಆಧುನಿಕ ಕೊಂಕಣಿ ಕವಿತೆ” ಎನ್ನುವ ವಿಷಯದಲ್ಲಿ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕೊಂಕಣಿಯ ಖ್ಯಾತ ಕವಿ ಆಂಡ್ರೂ ಡಿಕುನ್ಹಾರವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಧುನಿಕ ಕೊಂಕಣಿ ಕವಿತೆಯು ರೂಪಕ, ಪ್ರತಿಮೆ, ಉಪಮೆ, ಪ್ರಾಸ ಮುಂತಾದ ವೈಶಿಷ್ಟ್ಯಗಳನ್ನೊಳಗೊಂಡು ಸಮಾಜಮುಖಿಯಾಗುತ್ತಿವೆ ಎಂದು ತಿಳಿಸಿದರು. ಕೊಂಕಣಿ ಭಾಷೆಯಲ್ಲಿ ನವ್ಯ ಕವನ ಬರೆಯಲು ಉತ್ತಮ ಅವಕಾಶವಿದ್ದು ಯುವ ಬರಹಗಾರರು ಈ ನಿಟ್ಟಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎಂದರು. ಮುಂದುವರೆದು ಅವರು “ಮಧು” ಎನ್ನುವ ಕವಿತೆಯನ್ನು ಆಧುನಿಕ ಶೈಲಿಯಲ್ಲಿ ಕೊಂಕಣಿ ಸ್ನಾತಕೋತ್ತರ ವಿದ್ಯಾರ್ಥಿಗಳೆದುರು ಪ್ರಸ್ತುತಪಡಿಸಿದರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸರವರು ಮಾತನಾಡಿ ಕೊಂಕಣಿ ಆಧುನಿಕ ಕವಿತೆಗಳು ವಿದ್ಯಾರ್ಥಿಗಳ ಮೂಲಕ ಕಾಲೇಜಿನ ವಾಲ್ ಮ್ಯಾಗಜೀನ್ ಆಗುವಂತೆ ಪ್ರಯತ್ನಿಸಬೇಕೆಂದರು. ಸಾಮಾಜಿಕ ಜಾಲತಾಣ ಮತ್ತು ಫೇಸ್‍ಬುಕ್ ಮೂಲಕ ಕೊಂಕಣಿ ಆಧುನಿಕ ಕವಿತೆಗಳು ಇನ್ನಿತರ ಜನರನ್ನು ತಲುಪಲಿ ಎಂದರು.

ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕರಾದ ಡಾ. ಅರವಿಂದ ಶ್ಯಾನಭಾಗರವರು ಮಾತನಾಡಿ ಇಂತಹ ಸಂವಾದ ಮತ್ತು ಉಪನ್ಯಾಸಗಳಿಂದ ನಮಗೂ ಉತ್ತಮ ಕವಿತೆ ರಚಿಸಲು ಮಾರ್ಗದರ್ಶನ ಸಿಕ್ಕಂತಾಗುತ್ತದೆ ಎಂದರು. ಕಾರ್ಯಕ್ರಮದ ಸಮನ್ವಯಕಾರರಾದ ಡಾ. ದೇವದಾಸ ಪೈ ರವರು ವೇದಿಕೆಯಲ್ಲಿದ್ದರು. ಮರಿಯಾ ಲೊಬೊ ನಿರೂಪಿಸಿದರು. ನಾಟಕಕಾರ ಜೋನ್ ಪೆರ್ಮನ್ನೂರ್ ಉಪಸ್ಥಿತರಿದ್ದರು.


Spread the love