ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ
ಕುಂದಾಪುರ: ಕೃಷಿ ಆಧಾರಿತ ಭಾರತದಲ್ಲಿ ಗೋವುಗಳಿಗೆ ಹಾಗೂ ಗೋವಿನ ಉತ್ವನ್ನಗಳಿಗೂ ಅತ್ಯಂತ ಮಹತ್ವವಿದೆ. ಇಲ್ಲಿನ ಸಂಸ್ಕೃತಿ ಹಾಗೂ ಧಾರ್ಮಿಕ ಇತಿಹಾಸದ ಜತೆಯಲ್ಲಿ ಭಾವನಾತ್ಮಕ ಸಂಬಂಧಗಳನ್ನು ಇರಿಸಿಕೊಂಡಿರುವ ಗೋವುಗಳನ್ನು ರಕ್ಷಿಸುವ ಅನಿವಾರ್ಯತೆ ಇದೆ ಎಂದು ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ಹೇಳಿದರು.
ಮಂಗಳವಾರ ಸಂಜೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು, ದೇವಿಗೆ ಭಕ್ತಿಸುಧೆಯನ್ನು ಅರ್ಪಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಭಾರತೀಯ ತಳಿಯ ಗೋವುಗಳನ್ನು ರಕ್ಷಣೆ ಮಾಡುವ ಕಾರ್ಯಗಳು ದೇಶದಲ್ಲಿ ಹೆಚ್ಚಾಗಬೇಕು. ವಿದೇಶಿ ತಳಿಯ ಗೋವುಗಳಿಗೆ ಹೋಲಿಕೆ ಮಾಡಿದರೇ, ದೇಶಿಯ ತಳಿಯ ಗೋವುಗಳಲ್ಲಿ ಔಷಧಿಯ ಗುಣಗಳ ಮಹತ್ವವಿದೆ. ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯವಾದ ಕಾನೂನು ಜಾರಿಯಾಗಬೇಕು. ಹಿಂದೂ ಸಮಾಜದ ರಕ್ಞಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಕಾರ್ಯಗಳು ಅಭಿನಂದನೀಯ ಎಂದರು.
ಯಾವುದೇ ದೇವತೆಗಳು ಮಧ್ಯ–ಮಾಂಸಗಳನ್ನು ತಿನ್ನುವುದು ಇಲ್ಲ, ಅಪೇಕ್ಷಿಸುವುದು ಇಲ್ಲ. ಪ್ರಾಣಿ ಬಲಿಗಳನ್ನು ನೀಡುವುದರಿಂದ ಹಾಗೂ ಮಧ್ಯ–ಮಾಂಸಗಳ ನೈವೇದ್ಯ ಅರ್ಪಿಸುವುದರಿಂದ ದೇವಿ ಪ್ರಸನ್ನಳಾಗುತ್ತಾಳೆ ಎನ್ನುವುದು ಅಜ್ಞಾನದ ನಂಬಿಕೆ. ದೇವರಲ್ಲಿ ಅಚಲವಾದ ವಿಶ್ವಾಸ ಇರಿಸಿ, ಭಕ್ತಿಯನ್ನು ಅರ್ಪಿಸುವುದರಿಂದ ದೇವರು ಪ್ರಸನ್ನರಾಗುತ್ತಾರೆ ಎಂದು ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ಹೇಳಿದರು.
ಯಾವುದೆ ರೀತಿಯ ಜಾತಿ ಹಾಗೂ ಭಾಷಾ ವಾದಗಳು ಸರಿಯಲ್ಲ, ಭಾರತ ಮಾತೆಯ ಚರಣಾರವಿಂದಗಳಲ್ಲಿ ಸಮಸ್ತ ಹಿಂದೂಗಳು ಒಂದೆ ಎನ್ನುವ ಭಾವನೆಗಳು ಇರಬೇಕು. ಜಾತಿವಾದಗಳಿಂದಲೇ ಅತ್ಯಾಚಾರದಂತಹ ದುಷ್ಕೃತ್ಯಗಳು ನಡೆಯುತ್ತದೆ. ವರ್ಣಗಳಿಂದ ಜಾತಿಗಳನ್ನು ಗುರುತಿಸುವುದರಿಂದ ಹಾಗೂ ವರ್ಗ ಸಂಘರ್ಷಗಳಿಂದ ಏನನ್ನು ಸಾಧಿಸಲು ಆಗೋದಿಲ್ಲ. ಜಾತಿ ಹಾಗೂ ವರ್ಗದ ವಿಭಾಜಕಗಳನ್ನು ಬಿಟ್ಟು, ಧರ್ಮದ ನೆಲಯಲ್ಲಿ ಹಿಂದೂಗಳು ಒಂದೇ ಎನ್ನುವ ಭಾವನೆಗಳು ಜಾಗೃತವಾಗುವುದರಿಂದ ಭಾರತ ಹಿಂದೂ ರಾಷ್ಟ್ರವಾಗಿ ಉಜ್ವಲಿಸಲಿದೆ.
ಹಿಂದೂ ಧರ್ಮದ ಜಾಗೃತಿಗಾಗಿ ನಮ್ಮ ಪರ್ಯಟನ ನಡೆಯುತ್ತಿದೆ. ಮುಲ್ಕಿ ಸಮೀಪದ ಶಾಂಭವಿ ನದಿಯ ತಟದ ಸಮೀಪ ಭಗವತಿ ಕಾಳಿನ ಪರಮೇಶ್ವರಿಯ ಬ್ರಹತ್ ಮೂರ್ತಿಯನ್ನು ಹೊಂದಿರುವ ಭವ್ಯ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಶಿವ, ಗಣಪತಿ, ನಾಗ ಸೇರಿದಂತೆ ಪರಿವಾರ ದೇವತೆಗಳ ಪ್ರತಿಷ್ಠಾಪನೆ ಇಲ್ಲಿ ಆಗಲಿದೆ. ಮಾತೆ ಮೂಕಾಂಬಿಕೆ ಪ್ರತಿಷ್ಠೆಯಾಗಿರುವ ಕೊಲ್ಲೂರು ಕ್ಷೇತ್ರಕ್ಕೆ ಬಂದು ನನಗೆ ಧನ್ಯತೆ ಕಾಣಿಸುತ್ತಿದೆ. ಇಲ್ಲಿ ಹುದುಗಿರುವ ಶ್ರೀದೇವಿಯ ಬ್ರಹ್ಮಾಂಡ ಶಕ್ತಿಯಲ್ಲಿ ನಾವು ಭಕ್ತಿಯಲ್ಲಿ ಲೀನವಾದರೆ ಭಕ್ತಿಯ ಹುಚ್ಚರಾಗುವ ವಾತಾವರಣ ಇದೆ. ಈ ಕ್ಷೇತ್ರದಲ್ಲಿ ಬರುವ ಭಕ್ತರ ಎಲ್ಲ ಸಂಕಷ್ಟಗಳು ಪರಿಹಾರವಾಗಲಿ ಎಂದು ಅವರು ಆಶಿಸಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಶಕ್ತಿರಾಜ್, ಪ್ರತೀಕ್ ಶೆಟ್ಟಿ ಮುಲ್ಕಿ, ಅಭಿಷೇಕ್ ಭಂಡಾರಿ ಎಕ್ಕಾರು, ಶರತ್ ಹೆಗ್ಡೆ ಇದ್ದರು.